ಟಾಪ್ 3 ನ್ಯೂಸ್
ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು
– ತೆಕ್ಕಟ್ಟೆ ಮೂಲದ ಮಹಿಳೆ ಸಾವು, 6 ಮಂದಿ ಪ್ರಾಣಾಪಾಯದಿಂದ ಪಾರು
– ಸಾಗರ: 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!
– ಆನಂದಪುರ: ವೃದ್ದೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ!
NAMMUR EXPRESS NEWS
ಮಂಡಗದ್ದೆ: ಶಿವವೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕುಂದಾಪುರದ ತೆಕ್ಕಟ್ಟೆ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತೆಕ್ಕಟ್ಟೆಯ ಮಣಿಕಂಠ ಟ್ರಾನ್ಸ್ಪೋರ್ಟ್ ಮಾಲೀಕ ಶಂಕರ ದೇವಾಡಿಗ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದರು. ಸುರಿಯುತ್ತಿದ್ದ ಭಾರೀ ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆ ಸಮೀಪದ ನದಿಗೆ ಉರುಳಿದೆ. ಕಾರು ನೀರಿನಲ್ಲಿ ಮುಳುಗುತ್ತಿದಂತೆ ಸ್ಥಳೀಯರು ಧಾವಿಸಿ ರಕ್ಷಣೆಗಿಳಿದರೂ ಶಂಕರ ದೇವಾಡಿಗ ಅವರ ಪತ್ನಿ ಸವಿತಾ ದೇವಾಡಿಗ (57) ಅಸುನೀಗಿದರು. ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ರರಾದ ಅರುಣ್ ದೇವಾಡಿಗ ಹಾಗೂ ಎಂಜಿನಿಯರ್ ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್ ದೇವಾಡಿಗ ಹಾಗೂ 2.5 ವರ್ಷದ ಅಭಿಶ್ರೇಯ್ ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸವಿತಾ ಅವರಿಗೂ ಹೆಚ್ಚಿನ ಗಾಯಗಳಾಗಿಲ್ಲ, ಆದರೂ ಅಪಘಾತದ ಸಂದರ್ಭ ಉಂಟಾದ ಆಘಾತದಿಂದ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
– ಸಾಗರ: 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಒಂದು ದುರಂತ ಘಟನೆ ನಡೆದಿದೆ. ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ 14 ವರ್ಷದ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ವರದಿಯಾಗಿದೆ.
ಮೃತನನ್ನು ಇಕ್ಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ (14) ಎಂದು ಗುರುತಿಸಲಾಗಿದೆ. ಈತ ರೇಣುಕೇಶ್ ಅವರ ಪುತ್ರ ಎಂದು ತಿಳಿದುಬಂದಿದೆ. ನಿಖಿಲ್ ಭಾನುವಾರ ದಿನವಿಡೀ ಆಟವಾಡಿಕೊಂಡು ಮನೆಗೆ ಬಂದಿದ್ದ ಎನ್ನಲಾಗಿದೆ. ಆಟದ ಬಗ್ಗೆಯೇ ಹೆಚ್ಚು ಗಮನ ಹರಿಸಿದ್ದಕ್ಕೆ ತಂದೆ ರೇಣುಕೇಶ್ ಗ್ರಾಮೀಣ ಭಾಷೆಯಲ್ಲಿ ಮಗನನ್ನು ಸ್ವಲ್ಪ ಗದರಿಸಿದ್ದಾರೆ. ಆದರೆ, ನಂತರ ಸಮಾಧಾನಪಡಿಸಿ ಊಟ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ನಿಖಿಲ್ ಶಾಲೆಗೆ ಹೋಗಿರಲಿಲ್ಲ. ತಂದೆ ರೇಣುಕೇಶ್ ಹೊಲಗದ್ದೆಗೆ ಕೆಲಸಕ್ಕೆ ತೆರಳಿದ್ದರು. ತಾಯಿ ಪಕ್ಕದ ಮನೆಗೆ ಮಾತನಾಡಲು ಹೋಗಿದ್ದರೆ, ಅಜ್ಜಿ ಸೊಪ್ಪು ಕಡಿಯಲು ತೋಟಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ, ನಿಖಿಲ್ ಮನೆಯ ಅಟ್ಟದ ಮೇಲೆ ಸಹೋದರಿಯ ವೇಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ಮನೆಗೆ ಬಂದು ನೋಡಿದಾಗ, ನಿಖಿಲ್ ಒದ್ದಾಡುತ್ತಿದ್ದುದನ್ನು ಗಮನಿಸಿ ಕೂಡಲೇ ನೇಣು ಕತ್ತರಿಸಿ, ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲಿಯೇ ನಿಖಿಲ್ ಪ್ರಾಣಪಕ್ಷಿ ಹಾರಿಹೋಗಿದೆ. ಬಾಲಕನ ಮೃತದೇಹವನ್ನು ಸಾಗರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.
– ಆನಂದಪುರ: ವೃದ್ದೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ!
ಆನಂದಪುರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರನ್ನು ಕಂಬಕ್ಕೆ ಕಟ್ಟಿ ನಿರ್ದಯವಾಗಿ ಹಲ್ಲೆ ಮಾಡಲಾಗಿದೆ. ಗೌತಮಪುರ ಗ್ರಾಮದ 67 ವರ್ಷದ ಹುಚ್ಚಮ್ಮ ಕೊಲ್ಲಪ್ಪ ಎಂಬುವರು ತಮ್ಮ ಮನೆಯ ಜಾಗದಲ್ಲಿ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಪ್ರೇಮ ಎಂಬುವವರು ಕಸ ಹಾಕಿದ್ದನ್ನು ಪ್ರಶ್ನಿಸಿದ್ದಾರೆ. “ಇಲ್ಲಿ ಕಸ ಹಾಕಬೇಡಿ” ಎಂದು ಹೇಳಿದ್ದಕ್ಕೆ ಪ್ರೇಮ ಮತ್ತು ಅವರ ಮನೆಯ ಸದಸ್ಯರೆಲ್ಲರೂ ಸೇರಿಕೊಂಡು ವೃದ್ದೆ ಹುಚ್ಚಮ್ಮ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ ಎನ್ನಲಾಗಿದೆ. ವೃದ್ಧೆ ಹುಚ್ಚಮ್ಮ ಅವರನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯು ಆನಂದಪುರ ಸುತ್ತಮುತ್ತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.