Categories
ರಾಜ್ಯ

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಒಂಟಿ ದಂತವಿದ್ದ ಕಾಡಾನೆ ಕಳೇಬರ ಪತ್ತೆ..!!

ಟಾಪ್ 5 ನ್ಯೂಸ್ ಕರ್ನಾಟಕ

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಒಂಟಿ ದಂತವಿದ್ದ ಕಾಡಾನೆ ಕಳೇಬರ ಪತ್ತೆ..!!
– ರಾಯಚೂರು: ನಕಲಿ ಚಿನ್ನದ ಮೇಲೆ ಸಾಲ ಪಡೆದು 10 ಕೋಟಿ ವಂಚಿಸಿದ ಮ್ಯಾನೇಜರ್..!!
– ಶಿವಮೊಗ್ಗ : ಅಂಕಪಟ್ಟಿ ತಿದ್ದಿ ಮೆಸ್ಕಾಂನಲ್ಲಿ ಕೆಲಸ ಪಡೆದುಕೊಂಡಿದ್ದ ಇಬ್ಬರಿಗೆ ಜೈಲು ಶಿಕ್ಷೆ..!!
– ರಾಯಚೂರು: ಸಾವಿನಲ್ಲಿಯೂ ಒಂದಾದ ದಂಪತಿ.!!
– ಕೊಡಗು : ಒಂದೇ ಕುಟುಂಬ ನಾಲ್ಕು ಜನರನ್ನು ಹತ್ಯೆಗೈದ ರಾಕ್ಷಸ..!!

NAMMUR EXPRESS NEWS
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಜ್ಜೆಯ ವಲಯದಲ್ಲಿ ಸುಮಾರು 50 ವರ್ಷ ಪ್ರಾಯದ ಒಂಟಿ ದಂತ ಹೊಂದಿದ್ದ ಸಲಗ ಸಾವನ್ನಪ್ಪಿದೆ. ಆನೆಯು ಕಳೆದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು ತೇಗೂರು ಗುಡ್ಡ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯ ಗಸ್ತು ತಿರುಗುವಾಗ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದ ಎರಡು ವರ್ಷದಿಂದ ಆನೆಯ ಹಿಂಬದಿ ಎಡಗಾಲು ಡೊಂಕಾಗಿ ಕುಂಟುತ್ತ ಆರಣ್ಯದಲ್ಲಿ ಆಹಾರ ಅರಸುತ್ತಿತ್ತು ಎನ್ನಲಾಗಿದೆ. ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಅದರ ಹೊಟ್ಟೆಯಲ್ಲಿ ಯಾವುದೇ ಆಹಾರ ಕಂಡುಬಂದಿಲ್ಲ. ಹೀಗಾಗಿ ಆನೆ ಸಹಜವಾಗಿ ಸಾವನ್ನಪ್ಪಿದೆ ಎನ್ನಲಾಗಿದೆ. ಸರ್ಕಾರದ ಆದೇಶದ ಅನ್ವಯ ಆನೆಯ ದಂತವನ್ನು ತೆಗೆದು ಆನೆಯ ಕಳೇಬರ ಅಲ್ಲಿಯೇ ಬಿಡಲಾಗಿದೆ.

– ರಾಯಚೂರು: ನಕಲಿ ಚಿನ್ನದ ಮೇಲೆ ಸಾಲ ಪಡೆದು 10 ಕೋಟಿ ವಂಚಿಸಿದ ಮ್ಯಾನೇಜರ್..!!

ರಾಯಚೂರು: ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಮ್ಯಾನೇಜರ್ 10 ಕೋಟಿ ವಂಚಿಸಿದ ಘಟನೆ ನಗರದ ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಗರದ ಬ್ಯಾಂಕ್ ಆಫ್‌ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ(ಮ್ಯಾನೇಜರ್) ಕೆ.ನರೇಂದ್ರರೆಡ್ಡಿ ಎಂಬುವವರು ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಸುಮಾರು 10.97 ಕೋಟಿಯಷ್ಟು ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಪತ್ತೆಯಾಗಿದೆ. ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಆಕೌಂಟ್‌ಗೆ ಹಣ ವರ್ಗಾಮಾಡಿದ್ದು, ಹಿಂದಿನ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದು ವಂಚನೆ ಬಯಲು ಆಗುತ್ತಿದ್ದಂತೆ ಬ್ಯಾಂಕ್‌ನಿಂದ ಮ್ಯಾನೇಜ‌ರ್ ಕೆ.ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ.

– ಶಿವಮೊಗ್ಗ :ಅಂಕಪಟ್ಟಿ ತಿದ್ದಿ ಮೆಸ್ಕಾಂನಲ್ಲಿ ಕೆಲಸ ಪಡೆದುಕೊಂಡಿದ್ದ ಇಬ್ಬರಿಗೆ ಜೈಲು ಶಿಕ್ಷೆ..!!

ಶಿವಮೊಗ್ಗ: ಅಂಕಪಟ್ಟಿ ತಿದ್ದುಪಡಿ ಮಾಡಿ ಮೆಸ್ಕಾಂ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2016ರಲ್ಲಿ ಗಣೇಶ್ ಗೌಡ ಬಿ.ಜಿ ಮತ್ತು ಬಿ.ಬಿ. ಗಿರೀಶ್ ಇವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ, ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದು, ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಹಾಗೂ ಪಿಎಸ್‌ಐ ಇಮ್ರಾನ್ ಬೇಗ್, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಪ್ರಕರಣದ ವಾದ ಮಂಡಿಸಿದ್ದು, ನ್ಯಾಯಾಧೀಶರಾದ ಶಿವಕುಮಾರ್ ಜಿ.ಎನ್. ಅವರು ಆರೋಪಿಗಳ ವಂಚನೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ತಲಾ 4 ಸಾವಿರ ದಂಡ ಹಾಗೂ 6 ತಿಂಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

– ರಾಯಚೂರು: ಸಾವಿನಲ್ಲಿಯೂ ಒಂದಾದ ದಂಪತಿ..!!

ರಾಯಚೂರು: ಜೀವನದಲ್ಲಿ ಬಾಳ ಸಂಗಾತಿಯಾಗಿ ಜೀವನ ಸಾಗಿಸಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವ ಅಪರೂಪದ ಪ್ರಸಂಗ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ. ಪತ್ನಿ ಮೃತಪಟ್ಟು ಕೆಲವೇ ಗಂಟೆಗಳಲ್ಲೇ ಪತಿಯೂ ಪ್ರಾಣ ಬಿಟ್ಟಿದ್ದಾರೆ. ಕಳೆದ ಒಂದು ತಿಂಗಳಿಂದ ಬಿ.ಅಮರಮ್ಮ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಗುರುವಾರ ರಾತ್ರಿ ನಿಧನರಾದರು. ಈ ಸುದ್ದಿ ತಿಳಿದ ಪತಿ ಬಿ.ರಾಜಶೇಖರ ಆತ್ಮಸ್ಥೆರ್ಯ ಕಳೆದುಕೊಂಡಿದ್ದಾರೆ. ಅವರಿಗೂ ಆರೋಗ್ಯ ಸಮಸ್ಯೆ ಇತ್ತು. ಶುಕ್ರವಾರ ಬೆಳಗಿನ ಜಾವ ಅವರು ಕೂಡ ಪ್ರಾಣ ಬಿಟ್ಟಿದ್ದಾರೆ. ಅವರಿಗೆ ಪುತ್ರ, ಪುತ್ರಿ ಇದ್ದು, ಶುಕ್ರವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

– ಕೊಡಗು : ಒಂದೇ ಕುಟುಂಬ ನಾಲ್ಕು ಜನರನ್ನು ಹತ್ಯೆಗೈದ ರಾಕ್ಷಸ..!!

ಕೊಡಗು : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ, ಅತ್ತೆ ಮಾವನನ್ನು ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ. ಕೇರಳ ಮೂಲದ ಗಿರೀಶ್ (35) ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಬೇಗೂರಿನ ತನ್ನ ಮನೆಯಲ್ಲಿದ್ದ ಪತ್ನಿ ನಾಗಿ (30), ಪುತ್ರಿ ಕಾವೇರಿ (5), ಮಾವ ಜೇನು ಕುರುಬರ ಕರಿಯ(75), ಅತ್ತೆ ಗೌರಿ(70 ಯನ್ನು ಕತ್ತಿಯಿಂದ ಕತ್ತರಿಸಿ ಅಮಾನವೀಯ ಕೃತ್ಯವೆಸಗಿದ್ದಾನೆ. ಸುಮಾರು 7 ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಮಿಕರಾಗಿರುವ ದಂಪತಿ ತಮ್ಮ ಪುತ್ರಿಯೊಂದಿಗೆ ಇತ್ತೀಚಿಗೆ ಬೇಗೂರಿನ ಮಾವನ ಮನೆಗೆ ಬಂದು ವಾಸವಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಗಿರೀಶ್ ಪತ್ತೆಗೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.