ಟಾಪ್ 3 ನ್ಯೂಸ್ ಕರ್ನಾಟಕ
ಚಿತ್ರದುರ್ಗ : ವಿದ್ಯುತ್ ತಂತಿ ತಗುಲಿ ದುರಂತ ಮೂವರ ಸಾವು..!!
– ಮಂಡ್ಯ : ಹಾಸ್ಟೆಲ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು..!!
– ದಾಸರಹಳ್ಳಿ: ರ್ಯಾಗಿಂಗ್‌ಗೆ ಹೆದರಿ ಸೆಲ್ಫಿ ವಿಡಿಯೋ ಮಾಡಿ ಬಿಇ ವಿದ್ಯಾರ್ಥಿ ಆತ್ಮಹತ್ಯೆ..!!
NAMMUR EXPRESS NEWS
ಚಿತ್ರದುರ್ಗ: ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದ ಬಳಿ ನಡೆದಿದೆ. ದಾವಣಗೆರೆ ಮೂಲದ ಕಾರ್ಮಿಕರಾದ ನಜೀರ್ (30), ಫಾರುಕ್(30) ಮತ್ತು ಹೊಳಲ್ಕೆರೆ ತಾಲೂಕಿನ ಗ್ಯಾರೆಹಳ್ಳಿಯ ಶ್ರೀನಿವಾಸ್ (35) ಮೃತರು. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶ್ರೀನಿವಾಸ್ ಎಂಬುವವರು ತೋಟದಲ್ಲಿ ಕಬ್ಬಿಣದ ಕಂಬ ನೆಡುವ ವೇಳೆ ವಿದ್ಯುತ್ ತಂತಿ ತಗುಲಿ ದುರಂತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
– ಮಂಡ್ಯ : ಹಾಸ್ಟೆಲ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು..!!
ಮಂಡ್ಯ : ವೈದ್ಯಕೀಯ ಕಾಲೇಜು (ಮಿಮ್ಸ್)ವಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ವಸತಿ ನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಪ್ಪಳ ಮೂಲದ ವೈದ್ಯಕೀಯ ವಿದ್ಯಾರ್ಥಿ ಭರತ್ ಎತ್ತಿನಮನಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರೂಮ್ ಮೇಟ್ಸ್ ಊರಿಗೆ ತೆರಳಿದ್ದರು. ಅಂದು ರಾತ್ರಿ 12 ಗಂಟೆವರೆಗೆ ಸಹಪಾಠಿಗಳೊಂದಿಗೆ ಮಾತನಾಡಿದ ನಂತರ ತನ್ನ ಕೊಠಡಿಗೆ ಹಿಂತಿರುಗಿ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಆತನ ಕೊಠಡಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
– ದಾಸರಹಳ್ಳಿ: ರ್ಯಾಗಿಂಗ್‌ಗೆ ಹೆದರಿ ಸೆಲ್ಫಿ ವಿಡಿಯೋ ಮಾಡಿ ಬಿಇ ವಿದ್ಯಾರ್ಥಿ ಆತ್ಮಹತ್ಯೆ..!!
ದಾಸರಹಳ್ಳಿ : ಸ್ನೇಹಿತರ ರ್ಯಾಗಿಂಗ್‌ಗೆ ಹೆದರಿ ನಗರದ ಪ್ರತಿಷ್ಠಿತ ಕಾಲೇಜಿನ ಆರ್ಕಿಟೆಕ್ಚರ್ ಟಾಪರ್ ವಿದ್ಯಾರ್ಥಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದರಾಮಯ್ಯನ ಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದರಾಮಯ್ಯನ ಪಾಳ್ಯದಲ್ಲಿ ವಾಸವಿದ್ದ ಅರುಣ್ (22) ಮೃತ ವಿದ್ಯಾರ್ಥಿ. ಈತ ಮೂಲತಃ ಹಾಸನ ನಿವಾಸಿಗಳಾದ ಚನ್ನಕೇಶವ ಹಾಗೂ ತುಳಸಿ ಬಡ ದಂಪತಿಯ ಹಿರಿಯ ಮಗನಾಗಿದ್ದು, ಈ ಕುಟುಂಬ ಮಕ್ಕಳ ವಿದ್ಯಾಭ್ಯಾಸ ಹಾಗೂ ಕೆಲಸ ಅರಸಿ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದರಾಮಯ್ಯನ ಪಾಳ್ಯದಲ್ಲಿ ನೆಲೆಸಿದ್ದರು. ಪಾಲಕರು ಮೂಟೆ ಹೊತ್ತು ಕೂಲಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿದ್ದರು. ಅರುಣ್ ಜು.11ರಂದು ತಂದೆ-ತಾಯಿ ಕೆಲಸಕ್ಕೆ ತೆರಳಿದ್ದಾಗ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇದಕ್ಕೂ ಮುನ್ನ ‘ನನ್ನ ಬಗ್ಗೆ ಕಾಲೇಜಿನಲ್ಲಿ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡ್ತಾರೆ’ ಎಂದು ಸ್ನೇಹಿತರ ಕಿರುಕುಳ ಕುರಿತು ಸೆಲ್ಫಿ ವಿಡಿಯೋ ಹಾಗೂ ಮೆಸೇಜ್ ಮಾಡಿದ್ದ. ಈ ದೃಶ್ಯವನ್ನು ಪಾಲಕರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ ಕಾಲೇಜು ವಾಟ್ಸಪ್ ಗ್ರೂಪ್‌ನಲ್ಲಿ ವೈರಲ್ ಆಗಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.