Categories
ರಾಜ್ಯ

ಗಗನಕ್ಕೇರುತ್ತಿದೆ ಕೊಬ್ಬರಿ ಬೆಲೆ,ಒಂದೇ ದಿನದಲ್ಲಿ 3 ಸಾವಿರ ಏರಿಕೆ

ಗಗನಕ್ಕೇರುತ್ತಿದೆ ಕೊಬ್ಬರಿ ಬೆಲೆ,ಒಂದೇ ದಿನದಲ್ಲಿ 3 ಸಾವಿರ ಏರಿಕೆ

* ಸೋಮವಾರ 26 ಸಾವಿರ,ಗುರುವಾರ 29 ಸಾವಿರ ಬೆಲೆ
* ಉತ್ತರ ಭಾರತದಲ್ಲಿ ಇಳುವರಿ ಕಡಿಮೆ, ಬೇಡಿಕೆ ಹೆಚ್ಚಳ

NAMMMUR EXPRESS NEWS
ತಿಪಟೂರು: ಕಳೆದ ಸೋಮವಾರದ ಹರಾಜಿನಲ್ಲಿ 26 ಸಾವಿರ ರೂ. ದಾಟಿದ್ದ ಕೊಬ್ಬರಿ ಬೆಲೆ ಗುರುವಾರ ನಡೆದ ಹರಾಜಿನಲ್ಲಿ ಬರೋಬ್ಬರಿ 29 ಸಾವಿರ ರೂ. ಹೊಸ ದಾಖಲೆ ಬರೆದಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಮೂರು ಸಾವಿರ ಏರಿಕೆ ಕಂಡು ಮತ್ತೊಂದು ದಾಖಲೆ ಬರೆದಿದೆ.
ವಾರದಲ್ಲಿಎರಡು ದಿನ ಸೋಮವಾರ ಮತ್ತು ಗುರುವಾರ ಮಾತ್ರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ನಡೆಯುತ್ತದೆ. ಕಳೆದ ಎರಡು ತಿಂಗಳಿನಿಂದ ಪ್ರತಿ ಹರಾಜಿನಲ್ಲಿಯೂ 200 ರಿಂದ 500 ರೂ. ಏರಿಕೆ ಕಾಣುತ್ತಿದ್ದ ಕೊಬ್ಬರಿ ಬೆಲೆ ಕಳೆದ ಸೋಮವಾರವಷ್ಟೇ ಒಂದೇ ದಿನ ಎರಡು ಸಾವಿರ ರೂ. ಏರಿಕೆ ಕಂಡು 26 ಸಾವಿರ ದಾಟಿತ್ತು. ಈಗ ಗುರುವಾರ ನಡೆದ ಹರಾಜಿನಲ್ಲಿ ಒಂದೇ ದಿನ ಮೂರು ಸಾವಿರ ಏರಿಕೆ ಕಂಡು 29,118 ರೂ. ಮುಟ್ಟಿತು. ಇದರಿಂದ ಕೇವಲ ಎರಡು ತಿಂಗಳಿನಲ್ಲಿ ಕ್ವಿಂಟಾಲ್‌ ಕೊಬ್ಬರಿ ಬೆಲೆ ಬರೋಬ್ಬರಿ 11 ಸಾವಿರ ರೂ.ಗಳಷ್ಟು ಏರಿಕೆ ಕಂಡು ಎಂದೂ ಕಂಡರಿಯದ ದಾಖಲೆ ಬರೆದಿದೆ.

* ಉತ್ತರ ಭಾರತದಲ್ಲಿ ಇಳುವರಿ ಕಡಿಮೆ,ಬೇಡಿಕೆ ಹೆಚ್ಚಳ
ಉತ್ತರ ಭಾರತದಿಂದ ಕೊಬ್ಬರಿ ಬೇಡಿಕೆ ಹೆಚ್ಚುತ್ತಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೊಬ್ಬರಿ ಇಳುವರಿ ಕಡಿಮೆಯಾಗಿರುವುದೂ, ತಮಿಳುನಾಡು ಮತ್ತು ಕೇರಳಕ್ಕೆ ಹೆಚ್ಚು ಕೊಬ್ಬರಿ ಹೋಗುತ್ತಿರುವುದೂ ಇಷ್ಟು ಬೆಲೆ ಏರಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿಯಥೇಚ್ಛವಾಗಿ ನಡೆಯುತ್ತಿದ್ದ ಸೆಕೆಂಡ್ಸ್‌ ದಂಧೆಗೆ ಕಡಿವಾಣ ಹಾಕಿದ್ದೂ ಸಹ ಇಷ್ಟು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಹಿಂದೆಂದೂ ಕಾಣದ ಕೊಬ್ಬರಿ ಬೆಲೆ ಪಡೆಯುತ್ತಿರುವ ತೆಂಗು ಬೆಳೆಗಾರ ತನ್ನ ಬಳಿಯಿರುವ ಸ್ವಲ್ಪ ಕೊಬ್ಬರಿಗೂ ಉತ್ತಮ ಬೆಲೆ ಪಡೆದುಕೊಂಡು ಸಂತಸಗೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲೇ ಗುರುವಾರ ಅತ್ಯಂತ ಕಡಿಮೆ ಎನ್ನಬಹುದಾದ ಕೊಬ್ಬರಿ ಮಾರುಕಟ್ಟೆಗೆ ಬಂದಿತ್ತು. ಕೇವಲ 5,904 ಚೀಲ ಅಂದರೆ 2,538 ಕ್ವಿಂಟಾಲ್‌ ಕೊಬ್ಬರಿ ಮಾರುಕಟ್ಟೆಗೆ ಬಂದಿತ್ತು. ಕಳೆದ ಸೋಮವಾರ 7795 ಚೀಲ (3351 ಕ್ವಿಂಟಾಲ್‌) ಕೊಬ್ಬರಿ ಬಂದಿದ್ದರೆ, ಇದು ಗುರುವಾರ ಮತ್ತಷ್ಟು ಇಳಿಕೆಯಾಗಿತ್ತು.
ಗುರುವಾರದ ಬೆಲೆ ಏರಿಕೆಗೆ ಕೊಬ್ಬರಿ ಕಡಿಮೆ ಬಂದಿದ್ದೂ ಪ್ರಮುಖ ಕಾರಣವಾಗಿದೆ. ಇದೇ ರೀತಿ ಬೇಡಿಕೆ ಮುಂದುವರಿದರೆ, ಹಾಗೂ ಕೊಬ್ಬರಿ ಬರಯುವುದು ಕಡಿಮೆಯಾದರೆ ಕೊಬ್ಬರಿ ಬೆಲೆ ಮತ್ತಷ್ಟು ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.