ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಮೊಟ್ಟೆ ಬೆಲೆ..!!
– ಮೊಟ್ಟೆಯ ಸಗಟು ದರದಲ್ಲಿ 70 ಪೈಸೆ ಏರಿಕೆ
– ಮೊಟ್ಟೆ ಬೆಲೆ ಏರಿಕೆಗೆ ಕಾರಣ ಏನು?
NAMMUR EXPRESS NEWS
ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ’ ಎಂದೇ ಜನಜನಿತವಾರಿರುವ ಮೊಟ್ಟೆ ದರವು ಈಗ ಭಾರೀ ಏರಿಕೆಯಾಗಿದೆ. ಇದು ಬೆಂಗಳೂರಿನ ಪರಿಸ್ಥಿತಿ ಮಾತ್ರವಲ್ಲ, ಎಲ್ಲಾ ಮಾರುಕಟ್ಟೆಯೂ ಸೇರಿದಂತೆ ದೇಶಾದ್ಯಂತ ಮೊಟ್ಟೆಗೆ ಭಾರೀ ಬೇಡಿಕೆ. ಬೇಸಿಗೆ ಕಳೆದು ಮಳೆಗಾಲದ ವಾತಾವರಣ ಇರುವ ಕಾರಣ ಮೊಟ್ಟೆಗೆ ಈ ರೀತಿ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ. ಈ ಬಾರಿ ಪ್ರತೀ ಮೊಟ್ಟೆಗೆ ಸಗಟು ದರ 6.20 ರು.ಗಳಿದ್ದರೆ, 12ಕ್ಕೆ 78 ಇದೆ. ಅದೇ ಚಿಲ್ಲರೆ ಅಂಗಡಿಯಲ್ಲಿ 7 ರು. ಆನ್‌ಲೈನ್‌ನಲ್ಲಿ 7.50 ರು.ಗೆ ಮೊಟ್ಟೆ ಮಾರಾಟವಾಗುತ್ತಿದೆ.
ಸಗಟು ಮಾರುಕಟ್ಟೆಯಲ್ಲಿ 100ಕ್ಕೆ 550 ರು.ಗಳ ವರೆಗೆ ಮೊಟ್ಟೆ ಮಾರಾಟವಾಗುತ್ತಿತ್ತು. ಸಾಮಾನ್ಯವಾಗಿ 30-40 ಪೈಸೆ ಏರಿಕೆ ಹಿಂದೆಲ್ಲಾ ಆಗುತಿತ್ತು, ಆದರೆ ಈಗ 70 ಪೈಸೆಯಿಂದ 1 ರು. ಏರಿಕೆ ಒಮ್ಮೆಲೇ ಆಗಿದೆ.
ಶಾಲೆಗಳು ಪ್ರಾರಂಭವಾದ ಕೆಲವೇ ದಿನಗಳಲ್ಲಿ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಮೇರಿಕ, ಸೌದಿ ಅರೇಬಿಯಾ ದೇಶಗಳಿಗೆ ಇದೀಗ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತಿರುವುದು ದರ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು. ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಏರಿಕೆಯಾದರೂ ಮೊಟ್ಟೆ ಪೂರೈಕೆದಾರರಿಗೆ ಅದರ ಲಾಭಸಿಗುತ್ತಿಲ್ಲ. ಕೋಳಿಫಾರಂನಲ್ಲಿ ಕಡಿಮೆ ಬೆಲೆಗೆ ಖರೀದಿಸಿ, ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೋಳಿಫಾರಂ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ದಿನ, ಪ್ರತಿ 1.50 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ರಾಜ್ಯದ ಬೆಂಗಳೂರು ನಗರವೊಂದನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ ಮೈಸೂರು, ದಾವಣಗೆರೆ, ತಮಿಳುನಾಡಿನ ನಮಕ್ಕಲ್ ಭಾಗದಿಂದ ಮೊಟ್ಟೆಯ ಪೂರೈಕೆಯಾಗುತ್ತದೆ. ನಮ್ಮ ರಾಜ್ಯದ ಪೌಲ್ವಿಗಳಿಂದ ಬೇಡಿಕೆ ತಕ್ಕಷ್ಟು ಮೊಟ್ಟೆ ಪೂರೈಕೆ ಯಾಗುತ್ತಿಲ್ಲ.
– ಮೊಟ್ಟೆ ಬೆಲೆ ಏರಿಕೆಗೆ ಕಾರಣ ಏನು?
ಕೋಳಿಗಳಿಗೆ ಬಳಸುವ ಆಹಾರಗಳಾದ ಮೆಕ್ಕೆಜೋಳದ ಬೆಲೆ 2000 ರಿಂದ 2,600 ರು.ಗೆ ಏರಿಕೆಯಾಗಿದೆ. ಇನ್ನು ಸೂರ್ಯಕಾಂತಿ ಹಿಂಡಿ, ಕಡ್ಲೆಕಾಯಿ ಹಿಂಡಿ, ಸೋಯಾ ಹಿಂಡಿಯ ಬೆಲೆ ಹಿಂದಿಗಿಂತ ಶೇ. 20ರಷ್ಟು ಏರಿಕೆಯಾಗಿದೆ. ಜತೆಗೆ ಮೊಟ್ಟೆ ಉತ್ಪಾದನೆ ಶೇ. 25ರಷ್ಟು ಕೊರತೆ ಇದೆ, ಇದು ಮೊಟ್ಟೆ ದರ ಏರಿಕೆಗೆ ಪ್ರಮುಖ ಕಾರಣ. ಶಿಕ್ಷಣ ಇಲಾಖೆ ಈ ವರೆಗೆ ವಾರದಲ್ಲಿ 2 ದಿನ ಮಾತ್ರ ಮೊಟ್ಟೆ ವಿತರಣೆ ಮಾಡುತ್ತಿತ್ತು, ಆದರೆ ಇತ್ತೀಚೆಗೆ ಶಿಕ್ಷಣ ಇಲಾಖೆಯು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಜತೆ ಒಪ್ಪಂದ ಮಾಡಿಕೊಂಡು 1,500 ಕೋಟಿ ರು. ಅನುದಾನ ಪಡೆದಿದೆ, ಆ ಕಾರಣಕ್ಕಾಗಿ ವಾರದಲ್ಲಿ ಎರಡು ದಿನಗಳ ಬದಲಿಗೆ 6 ದಿನ ಮೊಟ್ಟೆ ನೀಡುತ್ತಿದೆ. ಹಾಗಾಗಿ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆ ಇಲ್ಲ, ಅದು ಕೂಡ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.