ಯಶಸ್ವಿನಿ ನೋಂದಣಿಗೆ ಅವಕಾಶ ಕೊಟ್ಟ ಸರ್ಕಾರ
– ನೋಂದಣಿಯಾದ ಸದಸ್ಯರಿಗೆ ಸರ್ಕಾರ ಮಾರ್ಚ್ 1 ರಿಂದ ಐಡಿ ಕಾರ್ಡ್ ವಿತರಣೆ
– ಹೊಸ ಷರತ್ತುಗಳೊಂದಿಗೆ ಯಶಸ್ವಿನಿ ಯೋಜನೆಗೆ ನೋಂದಣಿ
NAMMUR EXPRESS NEWS
ಬೆಂಗಳೂರು : ಕರ್ನಾಟಕ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ನೋಂದಣಿ 2025ಕ್ಕೆ ಚಾಲನೆ ನೀಡಿದೆ. ಯೋಜನೆಯಡಿ ನೋಂದಣಿಯಾದ ಸದಸ್ಯರಿಗೆ ಸರ್ಕಾರ ಮಾರ್ಚ್ 1 ರಿಂದ ಐಡಿ ಕಾರ್ಡ್‌ಗಳನ್ನು ನೀಡಲಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಯಾವುದೇ ಸಹಕಾರ ಸಂಘ/ ಬ್ಯಾಂಕ್‌ಗಳ ಸದಸ್ಯರು ಅಥವ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು ಸಹ ನೋಂದಣಿ ಮಾಡಿಕೊಳ್ಳಬಹುದು. 2025ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ನೋಂದಣಿಗೆ ಸರ್ಕಾರ ಆದೇಶವನ್ನು ಹೊರಡಿಸಿದೆ. ಮಾರ್ಗಸೂಚಿಗಳನ್ನು ಹೊರಡಿಸಿದೆ. ಖಾಸಗಿ ಕಂಪನಿ ಅಥವ ಇತರ ಸಂಸ್ಥೆಗಳಲ್ಲಿ ತಿಂಗಳಿಗೆ 30 ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುವವರು ಯಶಸ್ವಿನಿ ಆರೋಗ್ಯ ಯೋಜನೆ ನೋಂದಣಿಗೆ ಅರ್ಹರಲ್ಲ.
ಕೆಲವು ಹೊಸ ಷರತ್ತುಗಳೊಂದಿಗೆ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಡಿಸೆಂಬರ್ 1 ರಿಂದ 31ರ ತನಕ ನೋಂದಣಿ ಮಾಡಿಕೊಳ್ಳಬಹುದು. ಚಿಕಿತ್ಸಾ ಅವಧಿ 2025ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31 ಎಂದು ನಿಗದಿಗೊಳಿಸಲಾಗಿದೆ. ಈಗ ನೋಂದಣಿ ಮಾಡಿಕೊಂಡವರಿಗೆ ಮಾರ್ಚ್ 1 ರಿಂದ ಯೂನಿಕ್ ಐಡಿ ಸಂಖ್ಯೆ ಹೊಂದಿದ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ. 2025ರ ಏಪ್ರಿಲ್ 1ರಿಂದ ಫಲಾನುಭವಿಗಳು ನಗದು ರಹಿತ ಚಿಕಿತ್ಸೆಗಳನ್ನು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನೀಡಿ ಪಡೆಯಬಹುದು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿ ಕಾರ್ಯ ನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ 30 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವವರು ಹಾಗೂ ಅವರ ಅರ್ಹ ಕುಟುಂಬ ಸದಸ್ಯರು ನೋಂದಣಿ ಮಾಡಿಕೊಳ್ಳಲು ಅರ್ಹರು.