Categories
ರಾಜ್ಯ

ಹಾವೇರಿ: ಶಾಲೆಗೆ ಹೋಗುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿ ದಾಳಿ..!!

ಟಾಪ್ 4 ನ್ಯೂಸ್ ಕರ್ನಾಟಕ

ಹಾವೇರಿ: ಶಾಲೆಗೆ ಹೋಗುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿ ದಾಳಿ..!!
– ತುಮಕೂರು: ಹೃದಯಾಘಾತಕ್ಕೆ ಇಬ್ಬರ ದುರ್ಮರಣ
– ಬೆಳಗಾವಿ: ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ಕೃಷ್ಣಾ ನದಿಗೆ ಬಿದ್ದು ನಾಪತ್ತೆ..!!
– ಬೆಳಗಾವಿ: ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ..!!

NAMMUR EXPRESS NEWS
ಹಾವೇರಿ: ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ನಡೆದಿದೆ. ಸುಪ್ರೀತಾ ಲಕಮಾಪುರ (7) ಗಾಯಗೊಂಡ ಬಾಲಕಿ. ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಬೀದಿನಾಯಿಗಳು ದಾಳಿ ಮಾಡಿ ಬಾಲಕಿಯನ್ನು ಕಚ್ಚಿ ಗಾಯಗೊಳಿಸಿದೆ. ಬಾಲಕಿ ಚೀರಾಟ ಕೇಳಿ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಬಾಲಕಿಯನ್ನು ನಾಯಿಗಳಿಂದ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

– ತುಮಕೂರು: ಹೃದಯಾಘಾತಕ್ಕೆ 31 ವರ್ಷದ ವ್ಯಕ್ತಿ ಸೇರಿ ಇಬ್ಬರ ದುರ್ಮರಣ

ತುಮಕೂರು: ಹೃದಯಾಘಾತದಿಂದ ಕಕ್ಷಿದಾರ ಮತ್ತು ಅರಣ್ಯ ಪಾಲಕರೊಬ್ಬರು ಮೃತ ಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ಕಚ್ಚೇನ ಹಳ್ಳಿಯ ರಮೇಶ್ (55), ಅರಸೀಕೆರೆ ತಾಲೂಕಿನ ಸಿಂಗಟಗೆರೆ ನಿವಾಸಿ ಅರಣ್ಯ ಪಾಲಕ ನವೀನ್ (31) ಮೃತರು. ರಮೇಶ್‌ ಜಮೀನಿನ ವ್ಯಾಜ್ಯದ ವಿಚಾರವಾಗಿ ಗುಬ್ಬಿ ತಾಲೂಕಿನ ಕೋರ್ಟ್‌ಗೆ ಹಾಜರಾಗಿದ್ದರು. ಕಲಾಪ ಪ್ರಾರಂಭಗೊಂಡಾಗ ಒಳಗೆ ಹೋಗುವಾಗ ನ್ಯಾಯಾಲಯದ ಆವರಣದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯಯೇ ಕೊನೆಯುಸಿರು ಎಳೆದಿದ್ದಾರೆ. ನವೀನ್ ಶಿರಾ ತಾಲೂಕಿನ ಬುಕ್ಕಾಪಟ್ಟಣ ಅರಣ್ಯ ವಲಯ ದಸೂಡಿ ವ್ಯಾಪ್ತಿಯಲ್ಲಿ ಅರಣ್ಯ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲತಃ ಹಾಸನದ ಅರಸೀಕೆರೆ ತಾಲೂಕಿನ ಸಿಂಗಟಗೆರೆ ನಿವಾಸಿಯಾಗಿದ್ದು ಇತ್ತೀಚೆಗಷ್ಟೇ ತುಮಕೂರಿಗೆ ವರ್ಗಾವಣೆಯಾಗಿದ್ದರು.

– ಬೆಳಗಾವಿ: ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ಕೃಷ್ಣಾ ನದಿಗೆ ಬಿದ್ದು ನಾಪತ್ತೆ..!!

ಬೆಳಗಾವಿ: ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ಕೃಷ್ಣಾ ನದಿಗೆ ಬಿದ್ದು ನಾಪತ್ತೆ ಆಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಸಂಗೀತಾ ಮಾಂಜರೇಕರ್(40) ನಾಪತ್ತೆ ಆದ ಮಹಿಳೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂಗೀತಾ ತುಂಬಿ ಹರಿಯುತ್ತಿದ್ದ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಭೇಟಿ ನೀಡಿದ್ದು, ನಾಪತ್ತೆಯಾದ ಸಂಗೀತಾಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.

– ಬೆಳಗಾವಿ: ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ..!!

ಬೆಳಗಾವಿ : ತಾಲೂಕಿನ ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಓರ್ವ ಯುವಕನಿಗೆ ಚಾಕು ಇರಿಯಲಾಗಿದೆ. ಗ್ರಾಮದ ಮಜ್ಜು ಸನದಿ ಎಂಬ ಯುವಕ ಎದೆ ಭಾಗಕ್ಕೆ ಯುವಕರ ಗ್ಯಾಂಗ್​ ಒಂದು ಚಾಕು ಇರಿದು ಪರಾರಿ ಆಗಿದೆ. ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಮಜ್ಜುಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.