Categories
ರಾಜ್ಯ

ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್!

ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್!
– ಹವಾಮಾನ ಇಲಾಖೆ ಮುನ್ಸೂಚನೆ
– ಕೆಲವು ಕಡೆ ಮಳೆಗಾಗಿ ಪೂಜೆ ಪ್ರಾರ್ಥನೆ
– ಕರಾವಳಿಯಲ್ಲಿ ಮಳೆ, ಮಲೆನಾಡಲ್ಲಿ ಬರ

NAMMUR EXPRESS NEWS
ಬೆಂಗಳೂರು : ಮುಂದಿನ 24 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಶಿವಮೊಗ್ಗ ತುಮಕೂರು, ಬೆಳಗಾವಿ, ಧಾರವಾಡ, ಹಾವೇರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ರಾಮನಗರ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ಕೆಲವು ಕಡೆ ಮಾತ್ರ ಮಳೆಯಾಗಿದೆ. ಇನ್ನೂ ಬಯಲು ಸೀಮೆ ಪ್ರದೇಶಗಳಲ್ಲಿ ಜನರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಬಿಸಿಲಿನ ಬೇಗೆಗೆ ಬೆಳೆಗಳು ಒಣಗಿ ನಿಂತಿದೆ. ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮಲೆನಾಡಿನಲ್ಲಿ ಮಾಯವಾದ ಮಳೆ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆ ಸೇರಿ ಮಲೆನಾಡ ಭಾಗದಲ್ಲಿ ಮಳೆ ಕಣ್ಮರೆಯಾಗಿದೆ. ಇದರಿಂದ ಜನ ಮುಂದೆ ನೀರಿಗೆ ಗತಿ ಏನು ಎಂದು ತಲೆಬಿಸಿ ಮಾಡಿಕೊಂಡಿದ್ದಾರೆ.

ಕರಾವಳಿಯಲ್ಲಿ ಮಳೆ ಪ್ರತ್ಯಕ್ಷ

ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಉತ್ತಮ ಮಳೆ ಆಗಿದೆ.ಇನ್ನೂ ಕೆಲವು ಕಡೆ ಮಳೆಯಿಂದ ಹಾನಿ ಉಂಟಾಗಿದೆ ಮುಂಡಾಜೆ, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ನಾರಾವಿ, ಕುತ್ತೂರು, ವೇಣೂರು ಸಹಿತ ಎಲ್ಲೆಡೆ ಸಂಜೆ ಬಳಿಕ ಉತ್ತಮ ಮಳೆ ಸುರಿದಿದೆ. ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಕಡಬ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಅರ್ಧ ಗಂಟೆಗೂ ಅಧಿಕ ಸಮಯ ಮಳೆಯಾಗಿದೆ. ಸುಳ್ಯ ನಗರ, ಅರಂತೋಡು, ಸಂಪಾಜೆ, ಮಂಡೆಕೋಲು, ಜಾಲ್ಲೂರು, ಬೆಳ್ಳಾರೆ, ಪಂಜ, ಕೊಲ್ಲಮೊಗು, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಬಳ್ಳ, ಎಡಮಂಗಲ, ಬಿಳಿನೆಲೆ ಭಾಗದಲ್ಲಿ ಸಾಧರಣ ಮಳೆಯಾಗಿದೆ. ಕಡಬ, ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ ಭಾಗದಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಅ. 12ರಂದು ಎಲ್ಲೋ ಅಲರ್ಟ್ ಘೋಷಿಸ ಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಪುತ್ತೂರು ತಾಲೂಕು ಚಿಕ್ಕಮುಟ್ಟೂರು ಗ್ರಾಮದ ಕೊಲ್ಯದಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಪೂವಪ್ಪ ಗೌಡ ಅವರ ಮನೆ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.