ಮಂಜುನಾಥ್ ಗೌಡರ ಮನೆ ಮೇಲೆ ಇಡಿ ದಾಳಿ ಷಡ್ಯಂತ್ರ!
– ಬಿಜೆಪಿಯ ವಾಮಮಾರ್ಗದ ರಾಜಕೀಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗುವುದಿಲ್ಲ
– ಇನ್ನಷ್ಟು ಸಂಘಟತರಾಗುತ್ತೇವೆ: ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ವಿನಾಯಕ ತುಪ್ಪದಮನೆ
NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಕಾಂಗ್ರೆಸ್ ನಾಯಕರಾದ ಡಾ.ಆರ್. ಎಂ.ಮಂಜುನಾಥ್ ಗೌಡರ ಮನೆಯ ಮೇಲೆ ಇಡಿ ದಾಳಿ ಹಿಂದೆ ಬಿಜೆಪಿಯ ಕೇಂದ್ರ ಸರ್ಕಾರದ ಷಡ್ಯಂತ್ರವಿದೆ ಎಂದು ಯುವ ಕಾಂಗ್ರೆಸ್ ನಾಯಕ, ಹೊದಲ ಗ್ರಾಮ ಪಂಚಾಯತ್ ಸದಸ್ಯ, ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ವಿನಾಯಕ ತುಪ್ಪದಮನೆ ಆರೋಪಿಸಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು, ಮಂಜುನಾಥ್ ಗೌಡ ಅವರು ಕಾಂಗ್ರೆಸಿಗೆ ಬಂದ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ಅತ್ಯಂತ ಹೆಚ್ಚು ಸಂಘಟಿತವಾಗಿ ಪ್ರಬಲವಾಗುತ್ತಿದ್ದು, ಅದರಲ್ಲೂ ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲಾ ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ನಮ್ಮ ನಾಯಕರುಗಳಾದ ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ್ ಗೌಡರ ಸಂಘಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಇದರಿಂದ ಮುಂಬರುವ ಲೋಕಸಭಾ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಮಂಜುನಾಥ್ ಗೌಡರ ವಿರುದ್ಧ ಜಿಲ್ಲಾ ಮತ್ತು ತೀರ್ಥಹಳ್ಳಿಯ ಬಿಜೆಪಿ ನಾಯಕರುಗಳು ಕೇಂದ್ರ ನಾಯಕರುಗಳಿಗೆ ಇಲ್ಲಸಲ್ಲದ ದೂರುಗಳನ್ನು ಹೇಳಿ ಕೇಂದ್ರ ಸರ್ಕಾರದ ಸಂಸ್ಥೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಂಡು ಮಂಜುನಾಥ್ ಗೌಡರನ್ನ ಹಣೆಯಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಕುಗ್ಗಲ್ಲ…
ಬಿಜೆಪಿಯ ನಾಯಕರು ಈ ಹಿಂದೆಯೂ ಕಾಂಗ್ರೆಸ್ ನಾಯಕರಿಗೆ ಸರ್ಕಾರದ ಅನೇಕ ಸಂಸ್ಥೆಗಳನ್ನು ದುರ್ಬಳಕ್ಕೆ ಮಾಡಿಕೊಂಡು ರಾಜಕೀಯ ಬಲ ತಗ್ಗಿಸುವ ಪ್ಲಾನ್ ಮಾಡಿದ್ದಾರೆ. ವಾಮಮಾರ್ಗದ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನೈತಿಕ ಸ್ಥೆರ್ಯ ಕುಗ್ಗಿಸುತ್ತೇವೆ ಎಂದು ಕೊಂಡಿದ್ದರೆ ಇದು ನಿಮ್ಮ ಮೂರ್ಖತನ, ನಿಮ್ಮ ರಾಜಕೀಯ ಪಿತೂರಿಗಳಿಗೆ ಕಾಂಗ್ರೆಸ್ ನಾಯಕರಾಗಲಿ, ಕಾರ್ಯಕರ್ತರಾಗಲಿ ಕುಗ್ಗುವುದಿಲ್ಲ ಬದಲಾಗಿ ಇನ್ನಷ್ಟು ಹೆಚ್ಚು ಸಂಘಟಿತರಾಗುತ್ತೇವೆ.
ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇವೆ. ಜನ ವಿರೋಧಿ ಕೇಂದ್ರ ಸರ್ಕಾರ ಸರ್ಕಾರದ ತನಿಖೆ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ಕಾಂಗ್ರೆಸ್ ನಾಯಕರುಗಳ ವಿರುದ್ಧ ಈ ರೀತಿ ಬೆನ್ನ ಹಿಂದೆ ಪಿತೂರಿ ರಾಜಕಾರಣ ಮಾಡುವುದನ್ನು ಬಿಟ್ಟು ಅಧಿಕಾರದಲ್ಲಿ ಇರುವಷ್ಟು ದಿನ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ಈ ದೇಶದ ನಾಗರಿಕರಿಗೆ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳಂತಹ ಜನಪರ ಯೋಜನೆಗಳನ್ನು ಜಾರಿ ಮಾಡಲಿ ಎಂದು ವಿನಾಯಕ ತುಪ್ಪದ ಮನೆ ಹೇಳಿದ್ದಾರೆ.