ಗಣೇಶೋತ್ಸವ ವೇಳೆ ಭಾರೀ ದುರಂತ!
– ಮಂಡ್ಯ : ಡ್ಯಾನ್ಸ್ ಮಾಡುತ್ತಿರುವಾಗಲೇ ವ್ಯಕ್ತಿಗೆ ಹೃದಯಾಘಾತ
– ಮೈಸೂರು: ಗಣೇಶ ಮೆರವಣಿಗೆ ಟ್ರ್ಯಾಕ್ಟರ್ನಿಂದ ಬಿದ್ದು ಸಾವು..!
– ಚಿಕ್ಕಬಳ್ಳಾಪುರ: ಮೆರವಣಿಗೆ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು
– ಸಾಗರ : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್ ಸ್ಫೋಟ.!
– ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ
NAMMUR EXPRESS NEWS
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಂಜುನಾಥ್ ಮೃತ ವ್ಯಕ್ತಿ. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರ ಜೊತೆ ಡಿಜೆ ಹಾಡಿಗೆ ಮಂಜುನಾಥ್ ಭರ್ಜರಿ ಹೆಜ್ಜೆ ಹಾಕುತ್ತಿದ್ದರು. ಆದರೆ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜುನಾಥ್ ಅವರ ಕೊನೆಯ ಕ್ಷಣದ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ.
– ಮೈಸೂರು: ಗಣೇಶ ಮೆರವಣಿಗೆ ವೇಳೆ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವು..!!
ಮೈಸೂರು: ಗಣೇಶ ಮೆರವಣಿಗೆ ವೇಳೆ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. ಆಟೋ ರಾಜು(34) ಮೃತ ವ್ಯಕ್ತಿ. ಗ್ರಾಮದಲ್ಲಿ ಗಣಪತಿ ವಿಸರ್ಜನೆಗಾಗಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಇತ್ತ ಮನೆ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸಲು ರಾಜು ಟ್ರ್ಯಾಕ್ಟರ್ ಹತ್ತಿದ್ದ. ಪೂಜೆ ಸಲ್ಲಿಸುತ್ತಾ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ರಾಜುನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
– ಚಿಕ್ಕಬಳ್ಳಾಪುರ: ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು..!!
ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಕೂಡ ರಾತ್ರಿ ಘಟನೆ ನಡೆದಿದೆ. ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ವ್ಯಕ್ತಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ (40) ಮೃತ ವ್ಯಕ್ತಿ.
ಗಣೇಶ ವಿಸರ್ಜನೆ ಹಿನ್ನಲೆ ಗ್ರಾಮಸ್ಥರು ಡ್ಯಾನ್ಸ್ ಮಾಡುತ್ತಿದ್ದರು. ಲಕ್ಷ್ಮಿಪತಿ ಕೂಡ ಡ್ಯಾನ್ಸ್ ಮಾಡುತ್ತಿದ್ದು, ಹಠಾತ್ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
– ಸಾಗರ : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್ ಸ್ಫೋಟ.!
ಸಾಗರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಾಗರ ತಾಲೂಕಿನ ಡಿಗಟೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯುವಕ ಲೋಕೇಶ್‌ಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿಕಂಬ ಗಣೇಶೋತ್ಸವ ಸಮಿತಿಯ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಈ ಅವಘಡ ಸಂಭವಿಸಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
– ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ..!!
ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಓರ್ವ ಬಾಲಕ ಸಾವನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 15 ವರ್ಷದ ತನುಷ್ ರಾವ್ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ ವಿದ್ಯಾರ್ಥಿಗಳಾದ ಗಣೇಶ್, ಯೋಗೇಶ್, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು, ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಇದೇ ವೇಳೆ ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.