ಕರ್ನಾಟಕ ಟಾಪ್ 5 ನ್ಯೂಸ್..!
– ಸರಣಿ ಅಪಘಾತ; ಬೈಕ್ ಸವಾರ ಮೃತ್ಯು, 2 ಬಸ್,2 ಕಾರು ಜಖಂ
– ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಎಸ್ಐ ಗೆ ಗಂಭೀರ ಗಾಯ
– ಕಾರಿಗೆ ಸ್ಕೂಟರ್ ಢಿಕ್ಕಿ: ಲಾರಿ ಹರಿದು ಸವಾರ ಮೃತ್ಯು!
– ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ: ಪೋಷಕರ ಪ್ರತಿಭಟನೆ
– ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಿಕಿಯ ಕೊಲೆ:ಯುವತಿ ಸೆರೆ
NAMMUR EXPRESS NEWS
ಹುಣಸೂರು: ತಾಲೂಕಿನ ಅರಸು ಕಲ್ಲಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ, ಘಟನೆಯಲ್ಲಿ ಎರಡು ಬಸ್ಗಳು ಹಾಗೂ ಎರಡು ಕಾರುಗಳಿಗೆ ತೀವ್ರ ಜಖಂ ಆಗಿದೆ. ಮೈಸೂರು-ಬಂಟ್ವಾಳ ಹೆದ್ದಾರಿ-275ರ ಅರಸು ಕಲ್ಲಹಳ್ಳಿ ಗೇಟ್ ಬಳಿಯಲ್ಲಿ ಘಟನೆ ನಡೆದಿದ್ದು, ಮೈಸೂರು ತಾಲೂಕಿನ ಹೂಟಗಳ್ಳಿಯ ಎಸ್ಆರ್ಎಸ್ ಕಾಲೋನಿಯ ಲೇ. ಬೈರಪ್ಪರ ಪತ್ರ, ಕೂಲಿ ಕಾರ್ಮಿಕ ಕರಿಯಪ್ಪ(40) ಮೃತಪಟ್ಟಾತ, ಇವರಿಗೆ ಪತ್ನಿ, ಪುಟ್ಟ ಮಕ್ಕಳಿದ್ದಾರೆ.
ಘಟನೆ ವಿವರ:
ಕರಿಯಪ್ಪ ಹುಣಸೂರು ತಾಲೂಕಿನ ಅತ್ತಿಕುಪ್ಪೆಯಲ್ಲಿ ಬುಧವಾರ ನಡೆದ ಗ್ರಾಮದ ಹಬ್ಬದಲ್ಲಿ ಬಾಗವಹಿಸಿ ಸಂಜೆ 6.30ರ ವೇಳೆಗೆ ವಾಪಸ್ ಆಗುತ್ತಿದ್ದ ವೇಳೆ ಅರಸು ಕಲ್ಲಹಳ್ಳಿ ಬಳಿ ಹುಣಸೂರು ಡಿಪೋಗೆ ಸೇರಿದ ಬಸ್ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬಸ್ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಿಂದ ಗಾಬರಿಗೊಂಡ ಬಸ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದ ಇನ್ನೋವಾ ಕಾರು ಬಸ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಹಿಂದೆ ಬರುತ್ತಿದ್ದ ಬೆಂಜ್ ಕಾರು ಇನ್ನೋವಾ ಕಾರಿಗೆ ಹಾಗೂ ಹಿಂದೆ ಬರುತ್ತಿದ್ದ ಮತ್ತೊಂದು ಸರಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲಾ ವಾಹನಗಳಿಗೂ ಜಖಂಗೊಂಡಿದ್ದು. ಎಲ್ಲರೂ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಎಸ್ಐ ಗೆ ಗಂಭೀರ ಗಾಯ:
ಕುಣಿಗಲ್ : ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕುಣಿಗಲ್ ಪೊಲೀಸ್ ಠಾಣೆಯ ಎ.ಎಸ್.ಐ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಎಂ ರಸ್ತೆ ಆಲಪ್ಪನಗುಡ್ಡೆ ಸಮೀಪ ಬುಧವಾರ ಸಂಭವಿಸಿದೆ. ಕುಣಿಗಲ್ ಠಾಣೆಯ ಎಎಸ್ ಐ ವೆಂಕಟೇಶ್ (50) ಗಂಭೀರ ಗಾಯಗೊಂಡಿದ್ದಾರೆ.
ಘಟನೆ ವಿವರ :
ವೆಂಕಟೇಶ್ ಅವರು ಕರ್ತವ್ಯ ನಿಮಿತ ಎಡಿಯೂರಿಗೆ ಹೋಗಿ ಬೈಕ್ ನಲ್ಲಿ ಕುಣಿಗಲ್ ಗೆ ಹಿಂತಿರುಗಿ ಬರುತ್ತಿರಬೇಕಾದರೇ ಎಡಿಯೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡ ಎಎಸ್ಐ ವೆಂಕಟೇಶ್ ಅವರನ್ನು ನಾಗಮಂಗಲ ತಾಲೂಕು ಅಂದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆಸ್ಪತ್ರೆಗೆ ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಕಾರಿಗೆ ಸ್ಕೂಟರ್ ಢಿಕ್ಕಿ: ಲಾರಿ ಹರಿದು ಸವಾರ ಮೃತ್ಯು!
ಕುಂದಾಪುರ: ಕಾರಿಗೆ ಢಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಸ್ಕೂಟರ್ ಸವಾರರೊಬ್ಬರ ಮೇಲೆ ಲಾರಿಯ ಚಕ್ರ ಹರಿದು ಮೃತಪಟ್ಟ ಘಟನೆ ಬಳ್ಕೂರು ಗ್ರಾಮದಲ್ಲಿ ಮೇ 14ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಬಸವ(55) ಎಂದು ಗುರುತಿಸಲಾಗಿದೆ. ಬಸ್ರೂರು ಕಡೆಯಿಂದ ಬಳ್ಕೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಎದುರಿನ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಸ್ಕೂಟರ್ ಪಲ್ಟಿಯಾಗಿ ಸವಾರ ಬಸವ ರಸ್ತೆಯ ಮೇಲೆ ಬಿದ್ದರೆನ್ನಲಾಗಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ರಸ್ತೆಗೆ ಬಿದ್ದ ಬಸವ ಅವರ ಮೇಲೆ ಹತ್ತಿಸಿಕೊಂಡು ಹೋಗಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ:
ಬೆಂಗಳೂರು: ಬುಧವಾರ ರಾಜಧಾನಿಯ ಪ್ರತಿಷ್ಠಿತ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಾಹುಲ್ ಆತ್ಮಹತ್ಯೆಯೊಂದಿಗೆ, ಈ ಕಾಲೇಜಿನಲ್ಲಿ ಒಂದು ವರ್ಷದ ಅಂತರದಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಇವು ನಾಲ್ಕೂ ಕೂಡ ವಿಚಿತ್ರ ಸಾಮ್ಯತೆ ಹೊಂದಿವೆ. ನಾಲ್ವರೂ ಪಿಇಎಸ್ ಕಟ್ಟಡದಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಅಭ್ಯಾಸದಲ್ಲಿ ಟಾಪರ್ಗಳೇ ಆಗಿದ್ದಾರೆ
ಇತ್ತ, ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಆಡಳಿತ ಮಂಡಳಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಒಂದು ವರ್ಷದಲ್ಲಿ 4 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪರಿಸ್ಥಿತಿಯ ಗಂಭೀರತೆಯನ್ನು ಪೊಲೀಸರ ಹಾಗೂ ಸರ್ಕಾರದ ಗಮನಕ್ಕೆ ತರಲು ಪಿಇಎಸ್ ಯೂನಿವರ್ಸಿಟಿ ವಿರುದ್ಧ ಮೇ 18ಕ್ಕೆ ಪ್ರತಿಭಟನೆ ಪೋಷಕರಿಂದ ಫ್ರೀಡ್ಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ:
ಬೆಂಗಳೂರು: ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜೊತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಿಕಿಯನ್ನೇ ಕೊಲೆ ಮಾಡಿದ್ದಾಳೆ. ಮಾಲಕಿ ಕೊರಳಲ್ಲಿ ಧರಿಸಿದ್ದ ಚಿನ್ನದ ಸರದ ಆಕರ್ಷಣೆ ಕೊಲೆಗೆ ಮೂಲವಾಗಿದೆ. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಕೊಲೆಯಾದ ಮಹಿಳೆ. ಮೋನಿಕಾ (24) ಬಂಧಿತ ಆರೋಪಿ. ಶೋಕಿ ಜೀವನಕ್ಕಾಗಿ ಮನೆ ಮಾಲಕಿಯನ್ನೆ ಹತ್ಯೆ ಮಾಡಿದ ದಿವ್ಯಾಳನ್ನು ಬಂಧಿಸಲಾಗಿದೆ. ಮೋನಿಕಾ ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.
ಮೂಲತಃ ಕೋಲಾರ ಜಿಲ್ಲೆಯ ಮೋನಿಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಪ್ರಿಯಕರನನ್ನು ಗಂಡ ಎಂದು ಹೇಳಿ ಬಾಡಿಗೆಗೆ ಮನೆ ಗಿಟ್ಟಿಸಿದ್ದಳು. ಆದರೆ ಒಬ್ಬಳೇ ವಾಸವಿದ್ದು, ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ. ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳಲ್ಲದೆ, ಜೊತೆಗೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಿಕೊಡಲು ಹಣಕ್ಕಾಗಿ ಹುಡುಕಾಡುತ್ತಿದ್ದಳು. ಅಷ್ಟರಲ್ಲಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಆಕೆಯ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ನಡೆಸುತ್ತಿದ್ದರು.
ದಿವ್ಯಾ ಅತ್ತೆ ಮಾವ ಸಹ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇರುತ್ತಿದ್ದರು. ಇದನ್ನು ಗಮನಿಸಿ ಸ್ಕೆಚ್ ಹಾಕಿದ ಮೋನಿಕಾ, ಯಾರೂ ಇಲ್ಲದ ಸಮಯ ನೋಡಿ ಹಿಂಬದಿಯಿಂದ ಬಂದು ದಿವ್ಯಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.