Categories
ರಾಜ್ಯ

ಕೊಪ್ಪಳ: ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಟ್ಟು 7 ತಿಂಗಳ ಮಗು ಸಾವು..!!

ಟಾಪ್ 4 ನ್ಯೂಸ್ ಕರ್ನಾಟಕ

ಕೊಪ್ಪಳ: ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಟ್ಟು 7 ತಿಂಗಳ ಮಗು ಸಾವು..!!
– ಯಾದಗಿರಿ: ಬೊಲೆರೊ-ಬಸ್ ಡಿಕ್ಕಿಯಾಗಿ 5 ಜನ ಸಾವು..!!
– ಗಂಗಾವತಿ: ಮಗುಗೆ ಬೆಂಕಿ ಹಚ್ಚಿ, ತಾನು ಬೆಂಕಿ ಹಚ್ಚಿಕೊಂಡ ತಾಯಿ.!
– ಬಳ್ಳಾರಿ : ಕೃಷಿ ಹೊಂಡಕ್ಕೆ ಈಜಲು ಹೋದ ಬಾಲಕರ ಸಾವು..!!

NAMMUR EXPRESS NEWS
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ಪೋಷಕರು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ. ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು. ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಫೆ.2 ರಂದು ನಡೆದ ಶಿಶು ಮರಣ ತಡೆವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್, ಪಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇಲೆ ಕನಕಗಿರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಮಾಡಿದಾಗ, ಜ್ವರ ಬಂದ ಮಕ್ಕಳಿಗೆ ಪೋಷಕರು ಊದುಬತ್ತಿಯಿಂದ ಸುಟ್ಟಿರುವುದು ಗೊತ್ತಾಗಿದೆ. ಈ ಕುರಿತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಈ ಮಕ್ಕಳ ಬಗ್ಗೆ ನಿಗಾವಹಿಸಲು ಮತ್ತು ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

– ಯಾದಗಿರಿ: ಬೊಲೆರೊ-ಬಸ್ ಡಿಕ್ಕಿಯಾಗಿ 5 ಜನ ಸಾವು..!!

ಯಾದಗಿರಿ : ಬೊಲೆರೊ ಪಿಕಪ್ ವಾಹನ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿ, 25ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಮೀಪದ ಮದ್ದರಕಿ ಬಳಿ ನಡೆದಿದೆ. ತಂಗಮ್ಮ (52), ಸೋಮವ್ವ (55), ಚಾಲಕ ಶರಣಪ್ಪ (30), ಸುನಿತಾ (22) ಮೃತ ದುರ್ದೈವಿಗಳು. ಗಾಯಗೊಂಡಿದ್ದ ಹಣಮಂತಿ ಮಲ್ಲಯ್ಯ (35) ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಯಾದಗಿರಿ ಸಮೀಪದ ವರ್ಕನಳ್ಳಿ ಗ್ರಾಮದಿಂದ ಮಕ್ಕಳ ಜಾವಳ ಕಾರ್ಯಕ್ರಮ (ಮೊದಲ ಬಾರಿಗೆ ಮಕ್ಕಳ ತಲೆಕೂದಲು ತೆಗೆಸುವ ಸಂಸ್ಕಾರ) ಕ್ಕೆ ಸುಮಾರು 40 ಜನ ಬೊಲೆರೋ ಪಿಕಪ್ ಗೂಡ್ಸ್‌ ವಾಹನದಲ್ಲಿ ಘತ್ತರಗಿಗೆ ಹೊರಟಿದ್ದರು. ಈ ವೇಳೆ ಮದ್ದರಕಿ ಗ್ರಾಮದ ಸಮೀಪ ಘಟನೆ ಸಂಭವಿಸಿದೆ.

– ಗಂಗಾವತಿ: ಮಗುಗೆ ಬೆಂಕಿ ಹಚ್ಚಿ, ತಾನು ಬೆಂಕಿ ಹಚ್ಚಿಕೊಂಡ ತಾಯಿ

ಗಂಗಾವತಿ : ಮಗುವಿಗೆ ಬೆಂಕಿ ಹಚ್ಚಿ ಬಳಿಕ ತಾಯಿಯೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ಶುಕ್ರವಾರ ನಡೆದಿದೆ. ಸುಮಂಗಲಾ (35) ಮೃತ ಮಹಿಳೆ. ತೀವ್ರ ಗಾಯಗೊಂಡಿದ್ದ ಮಗು ಸಮನ್ವಿತಾಳನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಹಿಳೆ ಮಗುವಿಗೆ ಬೆಂಕಿ ಹಚ್ಚಿ ಬಳಿಕ ತಾನು ಬೆಂಕಿ ಹಚ್ಚಿಕೊಂಡು ಮನೆಯಿಂದ ಹೊಗೆ ಬರುವುದನ್ನು ನೋಡಿದ ಅಕ್ಕಪಕ್ಕದವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಮಹಿಳೆ ಸಂಪೂರ್ಣ ಸುಟ್ಟು ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಗಂಡನ ಕಿರುಕುಳ ಕಾರಣ ಎಂದು ಹೇಳಲಾಗಿದೆ.

– ಬಳ್ಳಾರಿ : ಕೃಷಿ ಹೊಂಡಕ್ಕೆ ಈಜಲು ಹೋದ ಬಾಲಕರ ಸಾವು..!!

ಬಳ್ಳಾರಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು
ಬಾಲಕರು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಶಿಡಗಿನಮೊಳ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ರಾಜೇಶ್ (13) ಮತ್ತು ಶಿವಶಂಕರ್ (13) ಮೃತ ಬಾಲಕರು. ಶಾಲೆ ರಜೆ ಹಿನ್ನೆಲೆಯಲ್ಲಿ ಕ್ರಿಕೆಟ್ ಆಡಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಇಬ್ಬರು ಕೃಷಿ ಹೊಂಡದಲ್ಲಿ ಈಜಲು ಹೋಗಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.