ರೇಷನ್ ಪಡೆಯಲು ಜನರ ಪರದಾಟ..!
* ಕರೆಂಟ್ ಇಲ್ಲ,ನೆಟ್ವರ್ಕ್ ಇಲ್ಲ,ಇಂಟರ್ನೆಟ್ ಇಲ್ಲ.. ಸರ್ವರ್ ಇಲ್ಲ
* ಕೂಲಿ ಬಿಟ್ಟು ಅಕ್ಕಿ ತರಲು ಹೋದವರ ಕಥೆ ಗೋವಿಂದಾ..!
ವಿಶೇಷ ವರದಿ: ಸಚಿನ್ ಶೃಂಗೇರಿ
NAMMMUR EXPRESS NEWS
ಮಳೆಗಾಲ ಪ್ರಾರಂಭವಾಗಿದ್ದು, ಮಳೆಯ ಆರ್ಭಟ ಜೋರಾಗಿಯೇ ಇದೆ. ವಿಪರೀತ ಮಳೆಯಿಂದ ಗುಡ್ಡ ಕುಸಿತ,ಮನೆ ಮೇಲೆ,ರಸ್ತೆ ಮೇಲೆ ಮರಗಳು ಬಿದ್ದು ಸಾರ್ವಜನಿಕರಿಗೆ ತೊಂದರೆ ಇಂತಹ ವರದಿಗಳನ್ನು ದಿನವು ಕೇಳುತ್ತಿದ್ದೇವೆ. ಇಂತಹ ಸಮಸ್ಯೆಗಳು ಒಂದು ಕಡೆಯಾದರೆ ಸಾರ್ವಜನಿಕರ ದೈನಂದಿನದ ಹಲವು ಕೆಲಸಗಳಿಗೆ ಮಳೆ ಸಮಸ್ಯೆಯುಂಟು ಮಾಡಿದೆ. ಇದೀಗ ರೇಷನ್ ವಿಚಾರದಲ್ಲೂ ಕೂಡ ಮಳೆ ಮತ್ತು ನೆಟ್ವರ್ಕ್ ತೊಂದರೆ ಉಂಟು ಮಾಡುತ್ತಿದೆ.
ಹೌದು. ಮರ ಬಿತ್ತು,ಗುಡ್ಡ ಕುಸಿಯಿತು,ವಿದ್ಯುತ್ ಕಂಬಗಳು ತುಂಡಾದವು,ಮೈನ್ ಲೈನ್ ಸಮಸ್ಯೆಯೆಂದು ಕರೆಂಟ್ ಕಣ್ಣಾಮುಚ್ಚಾಲೆ ಹಳ್ಳಿ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಕರೆಂಟ್ ಇದ್ದಾಗ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಕರೆಂಟ್ ಇಲ್ಲದಿದ್ದರೆ ನೆಟ್ವರ್ಕ್ ಇರಲ್ಲ. ಈ ಸಮಯ ತಿಂಗಳ ರೇಷನ್ ತರಲು ತಮ್ಮ ಊರಿನ ನ್ಯಾಯಬೆಲೆ ಅಂಗಡಿಗಳಿಗೆ ಹೋದರೆ ಅಲ್ಲಿ ಕರೆಂಟ್ ಇಲ್ಲದೇ ನೆಟ್ವರ್ಕ್ ಇರಲ್ಲ,ನೆಟ್ವರ್ಕ್ ಇಲ್ಲದೇ ಇಂಟರ್ನೆಟ್ ಇರಲ್ಲ,ಸರ್ವರ್ ಇರಲ್ಲ. ಇದು ಸಾವಿರಾರು ಹಳ್ಳಿಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ರಾಜ್ಯದ ವಿವಿಧ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.
ದುಡಿಮೆ ಬಿಟ್ಟು ಬಂದರೂ ಅಕ್ಕಿ ಸಿಗಲ್ಲ..!!
ತಮ್ಮ ತಿಂಗಳ ರೇಷನ್ಗಾಗಿ ತನ್ನ ಒಂದು ದಿನ ದುಡಿಮೆಯನ್ನೇ ಬಿಟ್ಟು ಬರುವ ಹಳ್ಳಿಗರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಇತ್ತ ರೇಷನ್ ಕೂಡ ಇಲ್ಲ ಅತ್ತ ದಿನದ ದುಡಿಮೆಯೂ ಇಲ್ಲದೇ ಬರಿ ಕೈಲಿ ಮನೆಗೆ ವಾಪಾಸ್ ಆಗುವಂತಾಗುತ್ತಿದೆ. ಇದರಿಂದ ದಿನದ ಕೂಲಿ ನಂಬಿಕೊಂಡಿರುವ ಬಡವರು, ಕೂಲಿ ವರ್ಗದ ಜೀವನ ತುಂಬಾ ಕಷ್ಟಕರವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಿ ಬಡ ಜನರಿಗೆ ನೆರವಾಗಬೇಕಿದೆ.
ತಂತ್ರಜ್ಞಾನ ಅಪ್ಡೇಟ್ ಮಾಡಬೇಕಿದೆ ಅಷ್ಟೇ..!
ಪ್ರತಿ ಬಾರಿಯೂ ಪಡಿತರ ತೆಗೆದುಕೊಳ್ಳುವಾಗ ಫಲಾನುಭವಿಯ ಬೆರಳಚ್ಚು ಪಡೆಯಬೇಕು ಎಂಬ ನಿಯಮ ಮತ್ತು ಗ್ರಾಮೀಣ ಭಾಗದಲ್ಲಿ ಈ ಬೆರಳಚ್ಚು ಪಡೆಯಲು ಸರ್ವರ್ ಸಿಗದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಒಂದೇ ಬೆರಳಚ್ಚು ಪದ್ಧತಿ ಬಿಡಬೇಕು, ಇಲ್ಲವೇ ತಂತ್ರಜ್ಞಾನ ಉತ್ತತೀಕರಿಸಬೇಕು. ತಂತ್ರಜ್ಞಾನ ಇಷ್ಟು ಮುಂದುವರಿದರೂ ಒಬೀರಾಯನ ಕಾಲದ ಆಪ್ ಇರುವುದೇ ಕಾರಣ ಎನ್ನಲಾಗಿದೆ. ಕುಟುಂಬ ಮತ್ತು ಆಹಾರ ನಾಗರೀಕ ಇಲಾಖೆ ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕಿದೆ.
