Categories
ರಾಜ್ಯ

ಮನೆಗೆ ಸಿಡಿಲು ಹೊಡೆಯೋದನ್ನು ತಡೆಯುತ್ತೆ ಈ ಯಂತ್ರ!

ಮನೆಗೆ ಸಿಡಿಲು ಹೊಡೆಯೋದನ್ನು ತಡೆಯುತ್ತೆ ಈ ಯಂತ್ರ!  
– ಮಿಂಚು ಮತ್ತು ಸಿಡಿಲಿನಿಂದ ಮನೆ ರಕ್ಷಿಸಲಿದೆ ಈ ಯಂತ್ರ..!
– ಕರಾವಳಿಯ ಸಂಶೋಧಕನ ಸಂಶೋಧನೆ ಯಶಸ್ವಿ
– ಆರ್ ಸಿಸಿ ಮನೆಗಳಿಗೆ ಅಳವಡಿಕೆಗೆ ಡಿಮ್ಯಾಂಡ್

NAMMUR EXPRESS NEWS
ಮಳೆ ಬೀಳುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು ಗುಡುಗಿನಿಂದಲೊ, ಮಿಂಚಿನಿಂದಲೊ ಅಥವಾ ಸಿಡಿಲಿನಿಂದಲೊ ಮನೆಯ ಟಿವಿ ಹಾಳಾಯಿತು, ಮಿಕ್ಸಿ ಕೆಟ್ಟು ಹೋಯಿತು, ಫ್ರಿಡ್ಜ್ ಕೆಲಸ ಮಾಡುತ್ತಿಲ್ಲ ಎನ್ನುವುದಾಗಿದೆ. ಇದಕ್ಕೆ ಪರಿಹಾರ ಈ ಒಂದು ಯಂತ್ರವನ್ನು ಅಳವಡಿಸುವುದಾಗಿದೆ. ಮಿಂಚು ಪ್ರತಿಬಂಧಕ ಎಂದು ಕರೆಯುವ ಈ ಯಂತ್ರವನ್ನು ಆರ್ ಸಿ ಸಿ ಮನೆಗಳಿಗೆ ಅಳವಡಿಸುವುದು ಒಳಿತು ಎನ್ನುವುದು ತಾಂತ್ರಿಕ ವಿಷಯದಲ್ಲಿ ಐಟಿಐ ಪದವಿಯನ್ನು ಗಳಿಸಿದ್ದು, ಈ ಕೆಲಸದಲ್ಲಿ 1998ರಿಂದ ಅನುಭವ ಪಡೆದ ಕರಾವಳಿ ಭಾಗದ ಅಶೋಕ್ ಕುಮಾರ್ ಅವರ ಅಭಿಪ್ರಾಯ. ಇವರ ಸಹೋದರ ಗಿರೀಶ್ ಅವರು ಎರಡು ವರ್ಷಗಳ ಹಿಂದೆ ಸಹೋದರ ಅಶೋಕ್ ಕುಮಾರ್ ಅವರಿಂದಲೇ ಮಿಂಚು ಪ್ರತಿಬಂಧಕವನ್ನು ಮನೆಗೆ ಅಳವಡಿಸಿಕೊಂಡಿದ್ದು, ಈಗ ಅಶೋಕ್ ಕುಮಾರ್ ಅವರು ತಮ್ಮ ಹೊಸ ಮನೆಗೆ ಅಳವಡಿಸಿದ್ದಾರೆ. ಮನೆಯ ಮೇಲಿನ ಭಾಗದಲ್ಲಿ ಬ್ರಾಸ್ ಅಥವಾ ಕಾಪರ್ ಬೋಲ್ಟ್ ಮತ್ತು ನಟ್ ಗಳನ್ನು ಅಳವಡಿಸಿ, ಅದರಿಂದ ತಂತಿಯನ್ನು ಪೈಪ್ ನ ಮೂಲಕ ಮನೆಯ ಗೋಡೆಗಳಿಗೆ ತಾಕದಂತೆ ನೇರವಾಗಿ ಕೆಳಗಿಳಿಸಿ, ಮನೆಯ ಹಿಂಭಾಗ ಅಥವಾ ಓಣಿಯಲ್ಲಿ ಐದು ಅಡಿ ಆಳದ ಹೊಂಡವನ್ನು ತೆಗೆದು, ಅದರೊಳಗೆ ಇಳಿಸಬೇಕು. ಮೊದಲಿಗೆ ಹೊಂಡದೊಳಗೆ ಕಾಪರ್ ಪ್ಲೇಟ್ ಅನ್ನು ಇರಿಸಿ ಅದಕ್ಕೆ ಬ್ರಾಸ್ ಅಥವಾ ಕಾಪರ್ ನ ನಟ್ ಮತ್ತು ಬೋಲ್ಟ್ ಗಳನ್ನು ಸೇರಿಸಬೇಕು. ಇದಕ್ಕೆ ಸ್ವಲ್ಪ ರಾಸಾಯನಿಕ ಅಂಶವನ್ನು ಬೆರೆಸಬೇಕಾಗುತ್ತದೆ. ಕಾಪರ್ ಅಥವಾ ಬ್ರಾಸ್ ಅನ್ನೇ ಇದಕ್ಕೆ ಬಳಸಬೇಕಾಗಿದೆ. ಸರಳು ಅಥವಾ ಕಬ್ಬಿಣಕ್ಕೆ ನಟ್ ಮತ್ತು ಬೋಲ್ಟ್ ಗಳನ್ನು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅರ್ಧಂಬರ್ಧ ಕೆಲಸದಿಂದ ಅಪಾಯವೇ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿಬಂಧಕವು ಮಿಂಚು ಮತ್ತು ಸಿಡಿಲನ್ನು ಎಳೆದುಕೊಂಡು ತಕ್ಷಣ ಬಿಡುಗಡೆಗೊಳಿಸುತ್ತದೆ. ಮನೆಯ ಮೇಲೆ ಅಳವಡಿಸಿದ್ದರೂ ಇದು ಸುಮಾರು ಎಂಭತ್ತು ಮೀಟರ್ ಪ್ರದೇಶದವರೆಗೂ ತನ್ನ ಸಾಮರ್ಥ್ಯವನ್ನು ನಿರ್ವಹಿಸುತ್ತದೆ. ಇದರಿಂದ ಮನೆಯಲ್ಲಿನ ವಿದ್ಯುತ್ ಉಪಕರಣಗಳ ಹಾನಿ, ಸಂಭವಿಸಬಹುದಾದ ಬೆಂಕಿಯ ಅವಘಡವನ್ನು ತಡೆಯಬಹುದಾಗಿದೆ.‌ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿಯನ್ನು ತಿಳಿದುಕೊಳ್ಳಲೇ ಬೇಕಾಗಿದೆ. ಅದೇನೆಂದರೆ ಮಿಂಚು ಪ್ರತಿಬಂಧಕವು ಕೇವಲ ಆಕಾಶದಿಂದ ನೇರವಾಗಿ ಬರುವ ಮಿಂಚು ಅಥವಾ ಸಿಡಿಲನ್ನು ಮಾತ್ರ ಸೆಳೆದುಕೊಂಡು ಕೆಲವೇ ಸೆಕೆಂಡುಗಳಲ್ಲಿ ಬಿಡುಗಡೆಗೊಳಿಸುತ್ತದೆ.‌ ಆದರೆ ವಿದ್ಯುತ್ ಕಂಬಗಳಿಂದ ಬರಬಹುದಾದ ಮಿಂಚು ಅಥವಾ ಸಿಡಿಲನ್ನು ಎಳೆದುಕೊಳ್ಳುವುದು ಸಾಧ್ಯವಿಲ್ಲ. ಹಿಂದೆ ಹೆಂಚಿನ ಮನೆಗಳು ಅಧಿಕ ಪ್ರಮಾಣದಲ್ಲಿದ್ದ ಕಾರಣಕ್ಕೆ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ಅಲ್ಲದೆ ಆರ್ ಸಿ ಸಿ ಮನೆಗಳಿಗೆ ಬುನಾದಿಯಲ್ಲಿ ಜಲ್ಲಿಕಲ್ಲುಗಳ ಜೊತೆಗೆ ಕಬ್ಬಿಣವನ್ನು ಅಳವಡಿಸುವುದರಿಂದ ಇಂತಹ ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಅಧಿಕವಾಗಿದೆ. ಜೊತೆಗೆ ಕಾಡಿನ ನಾಶದಿಂದ, ಪ್ರಕೃತಿಯ ವೈಪರೀತ್ಯದಿಂದ ತೊಂದರೆಗಳು ಎದುರಾಗುವುದು ಹೆಚ್ಚಾಗಿದೆ. ಅಶೋಕ್ ಕುಮಾರ್ ಅವರ ಅನುಭವದ ಪ್ರಕಾರ ಮಿಂಚು ಪ್ರತಿಬಂಧಕವು ಸುಮಾರು ಇಪ್ಪತ್ತೈದು ವರ್ಷಗಳ ತನಕ ಯಾವುದೇ ರೀತಿಯ ಸಮಸ್ಯೆಗೆ ಒಳಗಾಗುವುದಿಲ್ಲ. ಹೆಚ್ಚೆಂದರೆ ಎರೆಸ್ಟರ್ ಒಂದನ್ನು ಬದಲಾಯಿಸಬೇಕಾಗುತ್ತದೆ. ಇವರು ಇತರೆ ಉತ್ಪನ್ನಗಳಿಗೆ ಒಂದು ವರ್ಷ, ಎರಡು ವರ್ಷ, ಐದು ವರ್ಷ ಖಚಿತತೆ ನೀಡಿದಂತೆ, ಮಿಂಚು ಪ್ರತಿಬಂಧಕಕ್ಕೆ ಹತ್ತು ವರ್ಷಗಳ ವಾಯಿದೆಯನ್ನು ನೀಡುತ್ತಾರೆ. ಮತ್ತು ಹತ್ತು ವರ್ಷಗಳ ತನಕ ಅದಕ್ಕೆ ಸಂಬಂಧಿಸಿದಂತೆ ಉಚಿತ ಸೇವೆಯನ್ನು ಸಹ ನೀಡುತ್ತಾರೆ. ಇದರ ಬೆಲೆ ಕಟ್ಟಡದ ಎತ್ತರವನ್ನು ಮತ್ತು ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಇರುವ ಬ್ರಾಸ್ ಮತ್ತು ಕಾಪರ್ ನ ದರವನ್ನು ಅವಲಂಬಿಸಿರುತ್ತದೆ. ಸಾಧಾರಣ ಮನೆಗಳಿಗೆ ಸುಮಾರು ಮೂವತ್ತರಿಂದ ಮೂವತ್ತೈದು ಸಾವಿರ ತಗಲುತ್ತದೆ ಎನ್ನುತ್ತಾರೆ ಅಶೋಕ್ ಕುಮಾರ್. ಅವರು ಕರ್ನಾಟಕದ ಯಾವುದೇ ಭಾಗದಲ್ಲಾದರೂ ಬಂದು ಮಿಂಚು ಪ್ರತಿಬಂಧಕವನ್ನು ಅಳವಡಿಸಿ ಕೊಡುತ್ತಾರೆ. ಈ ಹಿಂದೆ ರಾಜಸ್ಥಾನದಂತಹ ಅನ್ಯ ರಾಜ್ಯಗಳಿಗೂ ತೆರಳಿ ಈ ಕಾರ್ಯವನ್ನು ನಿರ್ವಹಿಸಿ ಬಂದಿದ್ದಾರೆ. ಇದೀಗ ಇವರ ಕಾರ್ಯ ಜನರ ಮೆಚ್ಚುಗೆ ಪಡೆದಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.