Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ಭೀಕರ ರಸ್ತೆ ಅಪಘಾತ ನಾಲ್ವರ ಸಾವು, ಮೂವರು ಗಂಭೀರ.!
– ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ
– ಕಲಬುರ್ಗಿಯಲ್ಲಿ ಅಂಬೇಡ್ಕರ್ ಪುತ್ಥಳಿ ಧ್ವಂಸ ಪ್ರಕರಣ
– ಹೆತ್ತತಾಯಿ, ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿದ ಯುವಕ.!
– ಸಾರಿಗೆ ಬಸ್ – ಲಾರಿ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು
-13 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ತಂದೆ.!

NAMMUR EXPRESS NEWS
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿಯಾಗಿ 3 ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತರು ಲಿಂಗಪ್ಪ (26), ಸಿಂಧು ಶ್ರೀ (2), ಅಯ್ಯಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಎಂದು ತಿಳಿದುಬಂದಿದೆ. ಯಲ್ಲಮ್ಮ (30), ಮಲ್ಲಮ್ಮ (20), ನಾಗಪ್ಪ (35) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಮೃತರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ದೇವದುರ್ಗದಿಂದ ಬೆಂಗಳೂರಿಗೆ ಹೊರಟಿದ್ದ ವೇಳೆ ಚಾಲಕನ ನಿದ್ರೆ ಮಂಪರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪಿಎಸ್‌ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

ಹಾವೇರಿ: ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಈವರೆಗೆ ಪೊಲೀಸರು ಒಟ್ಟು 14 ಆರೋಪಿಗಳನ್ನು ಬಂಧಿಸಿದ್ದಾರೆ. 26 ವರ್ಷದ ಇಸ್ಮಾಯಿಲ್ ಹುಬ್ಬಳ್ಳಿ, 27 ವರ್ಷದ ರಿಯಾಜ್ ಸವಿಕೆರೆ ಮತ್ತು 24 ವರ್ಷದ ನಿಯಾಜ್ ದರ್ಗಾ ಬಂಧಿತ ಆರೋಪಗಳಾಗಿದ್ದಾರೆ. ಅನೈತಿಕ ಪೊಲೀಸ್‌ ಗಿರಿಯ ಸಂತ್ರಸ್ತೆ ಜನವರಿ 11ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿಕೆ ನೀಡಿದ್ದರು. ಜನವರಿ 8 ರಂದು ಹಾನಗಲ್ ಪಟ್ಟಣದಲ್ಲಿ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಕಾಣಿಸಿಕೊಂಡ ಮಹಿಳೆಯನ್ನು ಹೋಟೆಲ್‌ನಿಂದ ಹೊರಗೆಳೆದು ಥಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ತಾನು ಹೋಟೆಲ್‌ ನಲ್ಲಿದ್ದಾಗ, ಐದರಿಂದ ಆರು ಜನರ ತಂಡವು ಒಳಗೆ ನುಗ್ಗಿ, ಪ್ರಶ್ನಿಸಿ ಬಲವಂತವಾಗಿ ತಮ್ಮ ಬೈಕ್‌ ಗಳಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ತನ್ನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದರು ಮತ್ತು ನಂತರ ಎಲ್ಲರೂ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅನಂತರ ಕಾರಿಗೆ ಹತ್ತುವಂತೆ ಹೇಳಿ ಚಾಲಕ ಅತ್ಯಾಚಾರ ಎಸಗಿದ್ದಾನೆ. ಇಷ್ಟಕ್ಕೆ ನಿಲ್ಲಿಸದೇ ಇನ್ನೂ ಎರಡು ಮೂರು ಸ್ಥಳಗಳಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಬಳಿಕ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದು ಅಲ್ಲಿ ಬಸ್ ಹತ್ತಿಸಿದರು, ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಪೊಲೀಸರಿಗೆ ಮಾಡಿರುವ ಮನವಿಯಲ್ಲಿ ಒತ್ತಾಯಿಸಿದ್ದರು.

ಕಲಬುರ್ಗಿಯಲ್ಲಿ ಅಂಬೇಡ್ಕರ್ ಪುತ್ಥಳಿ ಧ್ವಂಸ ಪ್ರಕರಣ

ಕಲಬುರ್ಗಿ: ಕಲಬುರ್ಗಿಯಲ್ಲಿ ಅಂಬೇಡ್ಕರ್ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಘಟನೆಯ ಹಿಂದಿನ ಕಾರಣ ತಿಳಿದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ, ತನಿಖೆ ಪ್ರಗತಿಯಲ್ಲಿದೆ ಎಂದರು. ಕೃತ್ಯದ ಹಿಂದಿರುವ ವ್ಯಕ್ತಿಗಳ ಪಾತ್ರ ಹೊರಬಂದ ನಂತರ ಬಿಜೆಪಿ ಮೂಕಪ್ರೇಕ್ಷಕವಾಗಲಿದೆ. ನಮಗೆ ಮಾಹಿತಿ ಇದ್ದರೂ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಪುರಾವೆಗಳನ್ನು ಸಂಗ್ರಹಿಸಬೇಕಾಗಿದೆ ಮತ್ತು ನಾವು ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಕೃತ್ಯಕ್ಕೆ ಯೋಜನೆ ರೂಪಿಸಿದವರು ಯಾರು, ಏಕೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಇದೇ ವೇಳೆ ಅವರು ಹೇಳಿದರು.

ಹೆತ್ತತಾಯಿ, ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿದ ಯುವಕ

ಮೈಸೂರು : ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದಲ್ಲಿ ಯುವಕನೋರ್ವ ತನ್ನ ತಾಯಿ ಮತ್ತು ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿದ ಘಟನೆ ನಡೆದಿದೆ. ನಿತಿನ್‌ ಎಂಬಾತ ತಾಯಿ ಅನಿತಾ (43) ಮತ್ತು ತಂಗಿ ಧನುಶ್ರೀಯನ್ನು (19) ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಧನುಶ್ರೀ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದು ಊರಿನಲ್ಲೂ ಸುದ್ದಿಯಾಗಿತ್ತು. ಅಣ್ಣ ನಿತಿನ್‌ ಇದನ್ನು ಆಕ್ಷೇಪಿಸಿದ್ದ. ಈ ವಿಚಾರವಾಗಿ ಅಣ್ಣ ತಂಗಿ ನಡುವೆ ವೈಮನಸ್ಸು ಬೆಳೆದಿತ್ತು. ಅಣ್ಣನ ಮಾತನ್ನು ಕೇಳದೆ ಯುವಕನ ಜೊತೆ ಸುತ್ತಾಟ ಮುಂದುವರಿಸಿದ್ದಳು. ಇದರಿಂದ ಆಕ್ರೋಶಗೊಂಡ ನಿತಿನ್‌ ತಂಗಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾನೆ. ಅದರಂತೆ ತಾಯಿ ಹಾಗೂ ತಂಗಿಯನ್ನು ಜತೆಯಾಗಿ ಬೈಕ್‌ನಲ್ಲಿ ಕರೆದುಕೊಂಡು ಕೆರೆ ಬಳಿ ಹೋಗಿದ್ದಾನೆ. ಬಳಿಕ ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ ಎನ್ನಲಾಗಿದೆ. ಈ ವಿಷಯ ತಿಳಿದ ಸ್ಥಳೀಯರು ದೌಡಾಯಿಸಿದ್ದು, ನಿತಿನ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

 ಸಾರಿಗೆ ಬಸ್ – ಲಾರಿ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು

ಗದಗ : ಜಿಲ್ಲೆಯ ಮು‌ಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದಾರೆ , ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದ ಹಿನ್ನೆಲೆಯಲ್ಲಿ ಲಾರಿ ಹಾಗೂ ಸರ್ಕಾರಿ ಬಸ್ ನಜ್ಜುಗುಜ್ಜಾಗಿರೋದಾಗಿ ತಿಳಿದು ಬಂದಿದೆ. ಇನ್ನು ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ನಲ್ಲಿದ್ದ ಓರ್ವ ಮಹಿಳಾ ಪ್ರಯಾಣಿಕ ಹಾಗೂ ಲಾರಿ ಚಾಲಕ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಾರಿ ಚಾಲಕ ವಿನೋದಕುಮಾರ್‌ ಹಾಗೂ ಕೊಪ್ಪಳ ಜಿಲ್ಲೆಯ ಭಾಗ್ಯನಗರ ನಿವಾಸಿ ಗೀತಾ ಎನ್ನಲಾಗಿದೆ. ಮೃತ ಮಹಿಳೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ಹೊರಟಿದ್ದರು ಎನ್ನಲಾಗಿದೆ.

13 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ತಂದೆ.!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲತಂದೆಯೇ 13 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಆಘಾತಕಾರಿ ಘಟನೆ ನಡೆದಿದೆ. ಆಟೋ ಚಾಲಕನ ಸಹಾಯದಿಂದ ತಂದೆ ಇಂತಹ ನೀಚ ಕೆಲಸ ಮಾಡಿದ್ದಾನೆ. ಸದ್ಯ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.