ಉತ್ತರ ಕನ್ನಡ ಜಿಲ್ಲಾ ಪ್ರಮುಖ ಸುದ್ದಿ
ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
– ಮಲೆನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರದ ಮಹಿಮೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊನ್ನಾವರ: ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ತಾರೆ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಆರಾಧ್ಯ ದೈವ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿಯವರನ್ನು ಖುದ್ದಾಗಿ ಭೇಟಿ ಮಾಡಿದ ರಾಹುಲ್, ಅವರೊಟ್ಟಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದುಕೊಂಡರು. ಸ್ಟಾರ್ ಕ್ರಿಕೆಟಿಗನ ಭೇಟಿ ಕ್ಷೇತ್ರದ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ನವ ದೆಹಲಿಯಲ್ಲಿ ಚಿನ್ನ ಗೆದ್ದ ಕನ್ನಡದ ಹುಡುಗ!
– ಸಮರ್ಥ್ ಜೆ ರಾವ್ ಅವರಿಗೆ ಅಖಿಲ ಭಾರತ ನಾಗರಿಕ ಸೇವಾ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ
ನವದೆಹಲಿ: ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಸಮರ್ಥ್ ಜೆ ರಾವ್ ಅವರು ನವದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಇತ್ತೀಚಿಗೆನಡೆದ ಅಖಿಲ ಭಾರತ ನಾಗರಿಕ ಸೇವಾ ಚೆಸ್(AICS2025-26) ಪಂದ್ಯಾವಳಿಯಲ್ಲಿ ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದರು.
ತಂಡ ಚಾಂಪಿಯನ್ಶಿಪ್ನಲ್ಲಿ ಅವರು 6 ಸುತ್ತುಗಳಲ್ಲಿ 5.5 ಅಂಕಗಳನ್ನು ಗಳಿಸಿದರು ಮತ್ತು ಅವರ ತಂಡ 13ನೇ ಸ್ಥಾನವನ್ನು ಪಡೆದುಕೊಂಡಿತು. ವೈಯಕ್ತಿಕ ಚಾಂಪಿಯನ್ಶಿಪ್ನಲ್ಲಿ, ಸಮರ್ಥ್ 9 ಸುತ್ತುಗಳಲ್ಲಿ 7 ಅಂಕಗಳನ್ನು ಗಳಿಸಿ ಅಂತಿಮ ಶ್ರೇಯಾಂಕದಲ್ಲಿ 5ನೇ ಸ್ಥಾನವನ್ನು ಪಡೆದರು.
ಇದಲ್ಲದೆ, ಅವರು ಅತ್ಯುತ್ತಮ ವಿಶೇಷ ಸಾಮರ್ಥ್ಯವುಳ್ಳ ಆಟಗಾರನಿಗೆ ನೀಡಲಾಗುವ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸಮರ್ಥ್ ಅವರ ಈ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಚೆಸ್ ಆಟದ ಬಗ್ಗೆ ಅವರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಕರ್ನಾಟಕ ರಾಜ್ಯಕ್ಕೆ ಮತ್ತು ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರಿಗೆ ಹೆಮ್ಮೆ ತಂದಿದೆ.
