ನೃತ್ಯ ಲೋಕದ ಸಾಧಕಿ ವಿದುಷಿ ದೀಕ್ಷಾ..!
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ
- ಸತತ ಪರಿಶ್ರಮ, ಪ್ರಾಮಾಣಿಕತೆ, ಛಲ ಸಾಧನೆಗೆ ಶಕ್ತಿ
ಸಾಧನೆಗೆ ಬಡತನ, ಸಮಯ ಯಾವುದು ಅಡ್ಡಿ ಅಲ್ಲ. ಸತತ ಪರಿಶ್ರಮ, ಛಲದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಬ್ರಹ್ಮಾವರ ಮೂಲದ ವಿಶ್ವ ವಿಖ್ಯಾತ ಭರತನಾಟ್ಯ ಪಟು ವಿದುಷಿ ದೀಕ್ಷಾ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ದೀಕ್ಷಾ ಅವರು ಬಡ ಕುಟುಂಬದ ಮಗಳು. ತಂದೆ ದೀಕ್ಷಾ ಅವರು ಕಲಿಯುತ್ತಿದ್ದ ಲಿಟಲ್ ರಾಕ್ ಶಾಲೆಯ ವಾಹನದ ಡ್ರೈವರ್ ಆಗಿ ಕಾರ್ಯನಿರ್ವಹಿಸಿದರೆ, ತಾಯಿ ಅದೇ ಶಾಲೆಯ ಹಾಸ್ಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಲೆಯಲ್ಲಿ ಆಸಕ್ತಿ ಇರುವ ದೀಕ್ಷಾ ಅವರ ತಾಯಿ ಮಗಳನ್ನು ಮೂರನೇ ವಯಸ್ಸಿಗೇ ನೃತ್ಯ ತರಬೇತಿ ಶಾಲೆಗೆ ಸೇರಿಸಲು ಹೋದಾಗ “ಮಗು ತುಂಬಾ ಸಣ್ಣದು, ಅದರ ಕಾಲುಗಳಿಗೆ ನೃತ್ಯ ಮಾಡುವಷ್ಟು ಸಾಮರ್ಥ್ಯ ಬಂದಿರುವುದಿಲ್ಲ” ಎಂದು ಗುರುಗಳು ಮರಳಿ ಕಳುಹಿಸಿದ್ದರು. ದೀಕ್ಷಾ ಅವರ ತಾಯಿ ಪ್ರಯತ್ನ ಬಿಡಲಿಲ್ಲ. ಮಗಳ ಯುಕೆಜಿ ಕಲಿಕೆಯ ನಂತರ ಪುನಃ ಅದೇ ಗುರುಗಳ ಬಳಿಗೆ ನೃತ್ಯ ತರಬೇತಿಗೆ ದಾಖಲಿಸಿದರು. ಹೀಗೆ ಆರಂಭಗೊಂಡಿತು ದೀಕ್ಷಾ ಅವರ ನೃತ್ಯ ಕಲಿಕೆ.
ಉಮಾ ಅವರು ಕಲಿಸುತ್ತಿದ್ದಾಗ ದೀಕ್ಷಾ ಅವರಿಗೆ ನೃತ್ಯದ ಬಗ್ಗೆ ಆಸಕ್ತಿ ಇರಲಿಲ್ಲ. ತಂದೆ ತಾಯಿಯ ಒಬ್ಬಳೇ ಮಗಳಾದ ದೀಕ್ಷಾ ಏಕಾಂಗಿಯಾಗಿ ಆಡಿಕೊಳ್ಳುವುದರಲ್ಲೇ ಹೆಚ್ಚು ಸುಖವನ್ನು ಅನುಭವಿಸುತ್ತಿದ್ದಳು. ಮನುಷ್ಯರೊಂದಿಗೆ ಹೆಚ್ಚು ಬೆರೆಯದ ಈಕೆಗೆ ನಾಯಿ ಬೆಕ್ಕುಗಳೇ ಸಂಗಾತಿಗಳು. ಹೀಗಾಗಿ ಆಕೆಗೆ ನೃತ್ಯದ ಕುರಿತಾಗಲಿ, ಹೊರಗಡೆ ಹೋಗಿ ಕಲಿಯುವುದಾಗಲಿ ಆಗುತ್ತಿರಲಿಲ್ಲ. ಪರಿಣಾಮ ಐದು ತಿಂಗಳ ಕಾಲ ನೃತ್ಯಾಭ್ಯಾಸ ಸ್ಥಗಿತಗೊಂಡಿತು. ಆದರೆ ದೀಕ್ಷಾ ಅವರ ತಾಯಿ ಹಠ ಬಿಡದೆ ಶೃತಿ ರಾಘವೇಂದ್ರ ಭಟ್ ಎನ್ನುವ ಗುರುಗಳ ಬಳಿ ಮತ್ತೆ ದೀಕ್ಷಾಳನ್ನು ನೃತ್ಯ ಕಲಿಕೆಗೆ ಸೇರಿಸಿದರು. ಗುರುಗಳ ಪ್ರೇರಣೆಯೋ, ದೈವಕೃಪೆಯೋ ಎನ್ನುವಂತೆ ದೀಕ್ಷಾಳಲ್ಲಿ ನೃತ್ಯದ ಬಗ್ಗೆ ನಿಧಾನವಾಗಿ ಆಸಕ್ತಿ ಮೂಡತೊಡಗಿತು.
ನೃತ್ಯದ ಜೊತೆಗೆ ಶೈಕ್ಷಣಿಕ ಅಭ್ಯಾಸ ಕೂಡ ಮುಂದುವರಿಯಿತು. ದೀಕ್ಷಾ ಅವರು ಪದವಿ ಪೂರ್ವ ಶಿಕ್ಷಣವನ್ನು ಹೆಬ್ರಿಯ ಅಮೃತ ಭಾರತಿಯಲ್ಲಿ, ಬಿಎಸ್ ಸಿ ಪದವಿಯನ್ನು ಉಡುಪಿ ಅಜ್ಜರಕಾಡಿನ ಜಿ.ಶಂಕರ್ ಸರ್ಕಾರಿ ಕಾಲೇಜಿನಲ್ಲಿ ಪಡೆದುಕೊಂಡರು. ಪದವಿ ಶಿಕ್ಷಣ ಪಡೆಯುವಾಗ ದೀಕ್ಷಾ ಅವರು ಸಮಾಜಕ್ಕೆ ತೆರೆದುಕೊಂಡರು. ಮನುಷ್ಯ ಸಂಬಂಧದ ಮಹತ್ವ ಏನೆಂಬುದನ್ನು ಅವರ ಸ್ನೇಹಿತೆಯರು ತೋರಿಸಿದರು. ಅಲ್ಲಿಂದ ದೀಕ್ಷಾ ಅವರು ಜನರೊಂದಿಗೆ ಬೆರೆಯುವುದನ್ನು ಕಲಿತರು. ಪದವಿ ಶಿಕ್ಷಣದ ಬಳಿಕ ಟಿಎಂಎಪೈ ಸಂಸ್ಥೆಯಲ್ಲಿ ಬಿಎಡ್ ಅಭ್ಯಸಿಸುತ್ತಿದ್ದಾಗ ಕಾಲೇಜಿಗೆ ಆಗಮಿಸಿದ ಗಾಯಕರಾದ ಯಶವಂತ್ ಎಂ.ಜಿ ಅವರು ದೀಕ್ಷಾ ಅವರಿಗೆ ಪ್ರೇರಣೆಯಾದರು.
ಅವರು ಸತತ 24 ಗಂಟೆಗಳ ಕಾಲ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗೀತೆಗಳನ್ನು ಹಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರನ್ನು ದಾಖಲಿಸಿದಂತೆ, ನೃತ್ಯದಲ್ಲಿ ತಾನೇನಾದರೂ ಮಾಡಬೇಕೆಂದು ಅವರಲ್ಲಿ ಹೇಳಿಕೊಂಡರು. ಅದಕ್ಕೆ ಯಶವಂತ್ ಅವರು ತಾನು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಆದರೆ ದೀಕ್ಷಾ ಅವರಿಗೆ ಆಗ ಸಮಯವಿರಲಿಲ್ಲ. ಒಂದೆಡೆ ನೃತ್ಯದಲ್ಲಿ ವಿದ್ವತ್ ಗೆ ತಯಾರಿ, ಮತ್ತೊಂದೆಡೆ ಬಿಎಡ್ ಕಲಿಕೆ ನಿರಂತರವಾಗಿ ನಡೆಯುತ್ತಿತ್ತು. ಗುರುಗಳಾದ ಶ್ರೀಧರ್ ಬನ್ನಂಜೆ ಅವರು ಕೂಡ ಒಂದಾದ ಮೇಲೆ ಒಂದು ಮಾಡಿಕೊಳ್ಳು ಎಂದು ಸಲಹೆ ನೀಡಿದರು. ವಿದ್ವತ್ ಪರೀಕ್ಷೆಯನ್ನು ಪೂರೈಸಿದ ಬಳಿಕ ದೀಕ್ಷಾ ಅವರು ಬಿಎಡ್ ನ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಡುವೆ ಒಂದು ತಿಂಗಳ ಕಾಲ ಬಿಡುವು ದೊರೆತಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿ, ಭರತನಾಟ್ಯವನ್ನು ಸತತ 216 ಗಂಟೆ, ಒಂಭತ್ತು ದಿನಗಳ ಕಾಲ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದರು.
ತಂದೆ ತಾಯಿಯ ಜೊತೆಗೆ ಪತಿ ರಾಕೇಶ್ ಅವರ ಉತ್ತೇಜನ ಈ ಸಂದರ್ಭದಲ್ಲಿ ದೀಕ್ಷಾ ಅವರಿಗೆ ಬಹುಮುಖ್ಯವಾಗಿ ದೊರೆಯಿತು. ತನ್ನ ಪ್ರತಿಭೆಗೆ ಸದಾ ಬೆನ್ನೆಲುಬಾಗಿದ್ದ ಅಜ್ಜನನ್ನು (ತಾಯಿಯ ತಂದೆ) ಕಳೆದುಕೊಂಡಿದ್ದ ದೀಕ್ಷಾ ಅವರಿಗೆ ತಮ್ಮ ಪತಿಯ ರೂಪದಲ್ಲಿ ಅಜ್ಜ ಬಂದು ನನ್ನನ್ನು ಸಾಧಕಿಯನ್ನಾಗಿಸಿದ್ದಾರೆ ಎನ್ನಿಸಿತು. ಜೊತೆಗೆ 100ರೂಪಾಯಿ ದುಡಿದರೆ ಅದರಲ್ಲಿ 75ರೂಪಾಯಿಯನ್ನು ತನ್ನ ನೃತ್ಯಭ್ಯಾಸಕ್ಕೆ ಮೀಸಲಿಟ್ಟು ಉಳಿದ 25ರೂಪಾಯಿಯಲ್ಲಿ ಕುಟುಂಬವನ್ನು ನಿರ್ವಹಿಸಿದ ತಂದೆ ತಾಯಿಗಳ ಶ್ರಮ ಮತ್ತು ತ್ಯಾಗಕ್ಕೆ ತಾನು ತಕ್ಕ ಪ್ರತಿಫಲ ನೀಡಿದ್ದೇನೆ ಎನ್ನುವ ಸಾರ್ಥಕತೆ ದೀಕ್ಷಾ ಅವರಲ್ಲಿ ಮೂಡಿತು. ಹೀಗಾಗಿ ತನ್ನ ಸಾಧನೆ ಆಗಿರುವುದು ತನ್ನಿಂದಲ್ಲ. ದೇವರು ಮಾಡಿಸಿರುವುದು ಎನ್ನುವುದು ದೀಕ್ಷಾ ಅವರ ವಿನಯದ ಮಾತು.
