Categories
ತೀರ್ಥಹಳ್ಳಿ

ಸಿದ್ಧೇಶ್ವರ ಗುಡ್ಡದ ಶ್ರೀ ಸಿದ್ಧೇಶ್ವರ ಸ್ವಾಮಿಗೆ ಅದ್ಧೂರಿ ದೀಪೋತ್ಸವ!

ಸಿದ್ಧೇಶ್ವರ ಗುಡ್ಡದ ಶ್ರೀ ಸಿದ್ಧೇಶ್ವರ ಸ್ವಾಮಿಗೆ ಅದ್ಧೂರಿ ದೀಪೋತ್ಸವ!
– ಕಲ್ಲಿನ ಬೆಟ್ಟದ ಮೇಲೆ ನೆಲೆಯಾದ ಸಿದ್ಧೇಶ್ವರ ಸ್ವಾಮಿ.
– ದೀಪೋತ್ಸವವನ್ನು ಕಣ್ತುಂಬಿಕೊಂಡ ಭಕ್ತ ಸಮೂಹ!

NAMMUR EXPRESS NEWS
ತೀರ್ಥಹಳ್ಳಿ: ತಾಲೂಕಿನ ಸಮೀಪದ ಬಾಳೇಬೈಲಿನಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮಿಯ ದೀಪೋತ್ಸವವನ್ನು ಭಕ್ತಿ ಭಾವದಿಂದ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಅತ್ಯಂತ ಅಪರೂಪದ ಸಿದ್ಧೇಶ್ವರ ಸ್ವಾಮಿಯು ಕಲ್ಲಿನ ಬೆಟ್ಟದ ಮೇಲೆ ನೆಲೆಯಾಗಿ ನಿಂತು ಭಕ್ತರ ಕಷ್ಟವನ್ನು ಪರಿಹರಿಸಿ ಪೊರೆಯುತ್ತಿದ್ದು, ಶ್ರೀ ಸಿದ್ಧೇಶ್ವರ ಸ್ವಾಮಿಯ ದೀಪೋತ್ಸವ ವಿಜೃಂಭಣೆಯಿಂದ ಭಾನುವಾರ ನೆರವೇರಿತ್ತು. ನಿನ್ನೆ ಸಂಜೆ ಸಿದ್ಧೇಶ್ವರ ಸೇವಾ ಸಮಿತಿ ಬಳಗದವರ ವತಿಯಿಂದ ಅತ್ಯಂತ ಶ್ರದ್ಧಾ ಭಕ್ತಿಯಿಂದ, ಶ್ರೀ ಲಕ್ಷ್ಮೀಶ ತಂತ್ರಿಗಳ ಸಹಭಾಗಿತ್ವದಲ್ಲಿ, ಅವರ ಮಾರ್ಗದರ್ಶನದಲ್ಲಿ ಸ್ವಾಮಿಗೆ ಏಕಾದಶ ರುದ್ರಾಭಿಷೇಕ ಹಾಗೂ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ, ರಾತ್ರಿ ಸರಿ ಸುಮಾರು ಎಂಟು ಮೂವತ್ತಕ್ಕೆ ಸ್ವಾಮಿಗೆ ದೀಪೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಮತ್ತು ಪರ ಊರಿನಿಂದ ಭಕ್ತ ಜನ ಸಾಗರವೇ ಸೇರಿದ್ದು, ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಭಜನೆಯ ತಂಡದಿಂದ ದೇವರ ಸಂಕೀರ್ತನೆಯ ಭಜನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಆಯೋಜನೆಯಲ್ಲಿ ಒಂದು ಕೈ ಮೇಲು ಶ್ರೀ ಸಿದ್ಧೇಶ್ವರ ಸಮಿತಿ :

ಈ ಅದ್ಧೂರಿ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರು ಸುಮಾರು15 ದಿನಗಳ ಹಿಂದಿನಿಂದಲೂ ಶ್ರಮಿಸಿದ್ದು, ಆ ಶ್ರಮದ ಫಲವಾಗಿ ಯಾವ ಕುಂದು ಕೊರತೆಗಳೂ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಹಾಗೂ ಸಮಿತಿಯು ಅತ್ಯುತ್ತಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದೆ. ವಿದ್ಯುತ್ ಅಲಂಕಾರ, ದೇವಸ್ಥಾನದ ಪೂಜೆ, ಅನ್ನಸಂತರ್ಪಣೆ, ಭಕ್ತರಿಗೆ ಮಾಹಿತಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಸಮಿತಿಯ ಪ್ರಮುಖರಾದ ಸಂತೋಷ ಪೂಜಾರಿ, ಸಂತೋಷ್ ಶೆಟ್ಟಿ, ಪವನ್ ಬಾಳೆಬೈಲು, ಶಿವಾನಂದ್, ಪ್ರಶಾಂತ್, ಪವನ್ ಗವಾಸ್ಕರ್ ಸೇರಿದಂತೆ ಸಿದ್ಧೇಶ್ವರ ಗುಡ್ಡ, ಬಾಳೆಬೈಲಿನ ನೂರಾರು ಸದಸ್ಯರು ಈ ದೀಪೋತ್ಸವದ ಯಶಸ್ಸಿಗೆ ಶ್ರಮಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಆಗಬೇಕಿದೆ….!

ಸರ್ಕಾರ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಈ ದೇಗುಲದ ಜೀರ್ಣೋದ್ಧಾರ ಕೆಲಸ ಮಾಡಬೇಕೆನ್ನುವುದು ಭಕ್ತರ ಆಗ್ರಹ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಿಸಬೇಕು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ. ಮುಜರಾಯಿ ಇಲಾಖೆ ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕಿದೆ. ಈ ಹಿಂದೆ ಗೃಹಸಚಿವರಾಗಿದ್ದ ಈಗಿನ ಶಾಸಕರಾದ ಆರಗ ಜ್ಞಾನೇಂದ್ರ ದೇವಸ್ಥಾನದ ಅಭಿವೃದ್ಧಿಗಾಗಿ ಗುಡ್ಡದ ಕೆಳಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿದ್ದರು. ಈಗಾಗಲೇ ಸಮುದಾಯ ಭವನ ಕೂಡ ಉದ್ಘಾಟನೆ ಆಗಿದ್ದು ದೇವಸ್ಥಾನ ಗುಡ್ಡದ ಮೇಲಿರುವ ಕಾರಣ ಅಲ್ಲಿಗೆ‌ ತಲುಪಲು ವಿಶೇಷ ತಂತ್ರಜ್ಞಾನ ಬಳಸಿ ಸೂಕ್ತ ವ್ಯವಸ್ಥೆ ಮಾಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಇಂದು ಸಂಜೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದು ಸಿದ್ಧೇಶ್ವರ ಗುಡ್ಡದ ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕಾಗಿ ಸಮಿತಿಯು ಸರ್ವರನ್ನೂ ಆಮಂತ್ರಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.