ತೀರ್ಥಹಳ್ಳಿಯಲ್ಲಿ ಅದ್ಧೂರಿ ಮಕ್ಕಳ ಸಾಹಿತ್ಯ ಸಮ್ಮೇಳನ!
– ತಾಲೂಕು ಮಟ್ಟದ ಸಮ್ಮೇಳನಕ್ಕೆ ಮಕ್ಕಳೇ ರೂವಾರಿಗಳು!
– ಕುಮಾರಿ ರಜತ ಡಿ,ಕುಮಾರಿ ಸಾನಿಕ ಎಂ ಹೆಗಡೆ ಯಶಸ್ವೀ ನಿರ್ವಹಣೆ!
– ತೀರ್ಥಹಳ್ಳಿ ತಾಲೂಕಿನ ಸಾಧಕ ಮಕ್ಕಳಿಗೆ ಸನ್ಮಾನ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವು ದಿನಾಂಕ 3:1:2024 ರ ಈ ದಿನ ಗೋಪಾಲಗೌಡ ರಂಗಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಶಾಲಾ ಮಕ್ಕಳಾದ ಕುಮಾರಿ ರಜತ ಡಿ, ಮತ್ತು ಕುಮಾರಿ ಸಾನಿಕ ಎಂ ಹೆಗಡೆ ವಹಿಸಿದ್ದಾರೆ. ತಾಲೂಕು ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ, ಕನ್ನಡ ಜಾನಪದ ಪರಿಷತ್ತು ತೀರ್ಥಹಳ್ಳಿ, ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿ ಸಹಯೋಗದೊಂದಿಗೆ, ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಂಸ್ಕೃತ ವೇದಿಕೆ ವತಿಯಿಂದ, ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತಿದ್ದು, ಬೆಳಿಗ್ಗೆ ಕಾರ್ಯಕ್ರಮವು 8:30 ಕ್ಕೆ ಕುಶಾವತಿ ಪಾರ್ಕಿನಿಂದ ಆರಂಭವಾಗಿ, ಶಾಲಾ ಮಕ್ಕಳೊಂದಿಗೆ ಮೆರವಣಿಗೆಯ ಮೂಲಕ ಗೋಪಾಲಗೌಡ ರಂಗ ಮಂದಿರ ತಲುಪಿ ನಂತರ ಉದ್ಘಾಟನಾ ಕಾರ್ಯಕ್ರಮ 11 ಗಂಟೆಗೆ ನಡೆಯಿತು.
ಮಧ್ಯಾಹ್ನ 3 ಗಂಟೆಗೆ ಕಾವ್ಯ ಕಲರವ ಕವಿ ಗೋಷ್ಠಿ, ಕಥಾ ಗೋಷ್ಠಿ, ಮತ್ತು ಪ್ರಬಂಧ ಗೋಷ್ಠಿಯನ್ನು ಆಯೋಜಿಸಿದ್ದು ಈಗ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ನಡೆಯುತ್ತಿವೆ. ಬೇರೆ ಬೇರೆ ಶಾಲೆಗಳಿಂದ ಭಾಗವಹಿಸಿದ ಮಕ್ಕಳು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮಕ್ಕಳ ಸಾಹಿತ್ಯಾಸಕ್ತಿ ನಿಜಕ್ಕೂ ಮುದಗೊಳಿಸುವಂತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೀಗ ಕಾರ್ಯಕ್ರಮ ಸಮಾರೋಪ ಸಮಾರಂಭದ ಹಂತಕ್ಕೆ ಬಂದಿದ್ದು ಸಭಾಂಗಣ ಪ್ರೇಕ್ಷಕರು ಮತ್ತು ಮಕ್ಕಳಿಂದ ತುಂಬಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್, ಮಹಾಬಲೇಶ್ವರ ಹೆಗಡೆ, ನಾಗೇಶ್ ಮುಖ್ಯೋಪಾಧ್ಯಾಯರು ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದಾರೆ.
