ಒಂಟಿ ಸಲಗ ಎನ್.ಆರ್ ಪುರದಿಂದ ತೀರ್ಥಹಳ್ಳಿಗೆ ಎಂಟ್ರಿ!
* ಗುತ್ತಿಯಡೇಹಳ್ಳಿ ಸಮೀಪ ಆನೆ ಪ್ರತ್ಯಕ್ಷ, ಅಲ್ಲಿಂದ ತೀರ್ಥಹಳ್ಳಿಗೆ
* ರೇಡಿಯೋ ಕಾಲರ್ ಅಳವಡಿಸಿದ ಆನೆ: ಜನರಿಗೆ ಭಯ
NAMMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಿಗ್ಗೆ ಮುಡುಬದಲ್ಲಿ ಕಾಣಿಸಿಕೊಂಡಿದ್ದ ಆನೆ ಶನಿವಾರ ಕುಚ್ಚಲು, ಮಳಗಾರು ಬಳಿ ಕಾಣಿಸಿಕೊಂಡಿತ್ತು. ಶನಿವಾರ ರಾತ್ರಿ ಸೀಕೆ, ಕಾವೇರಿ, ಬೈಲುಬಡಿಗೆ, ಕುಡುವಳ್ಳಿ, ಮಳಗಾರು ಸಮೀಪ ಓಡಾಟ ಆರಂಭಿಸಿದೆ. ಇದೀಗ ಭಾನುವಾರ ಬೆಳಗ್ಗೆ ಗುಡ್ಡೆಕೊಪ್ಪದಲ್ಲಿ ಕಾಣಿಸಿಕೊಂಡಿದೆ.
ಅರಣ್ಯ ಇಲಾಖೆ ಆನೆ ಬಂದ ದಾರಿಯ ಮೂಲಕ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ತೀರ್ಥಹಳ್ಳಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚರಿಸುವ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಓಡಾಡುವ ಪ್ರತಿಯೊಬ್ಬರು ವಿನಾಕಾರಣ ಮನೆಯಿಂದ ಹೊರಗೆ ಹೋಗದಂತ ಕಟ್ಟೆಚ್ಚರ ನೀಡಲಾಗಿದೆ. ಆನೆ ಬಂದ ದಾರಿಯನ್ನು ಹುಡುಕುತ್ತಲಿದ್ದು ಯಾವುದೇ ಕಾರಣಕ್ಕೆ ಆನೆಗೆ ತೊಂದರೆ ನೀಡದಂತೆ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆ ಮನವಿ ಮಾಡಿದೆ.
ಈ ಆನೆಯು ಎನ್.ಆರ್ ಪುರ ತಾಲೂಕು ಮುತ್ತಿನ ಕೊಪ್ಪ ವ್ಯಾಪ್ತಿಯಲ್ಲಿ ಎರಡು ದಿನ ಓಡಾಡಿ ಆತಂಕ ಸೃಷ್ಟಿಸಿತ್ತು ಈಗ ಅಲ್ಲಿಂದ ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕುಚ್ಚಲು ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಆರಗದ ಕಲ್ಲುಂಡಿ ಸಮೀಪ ಕಾಣಿಸಿಕೊಂಡಿದೆ. ಬೆಳಗಿನ ಜಾವ ಓಡಾಟ ಆರಂಭಿಸಿರುವ ಆನೆ ಸುಮಾರು 50 ಕಿ.ಮೀ. ಕ್ರಮಿಸಿದೆ.
ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದು ಆನೆ ನಡೆದ ದಾರಿಗಳ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಆದರೆ ರೇಡಿಯೋ ಕಾಲರ್ ಅಪ್ಡೇಟ್ ವಿಚಾರದಲ್ಲಿ ತೀರಾ ವಿಳಂಬವಾಗಿದ್ದು ಮೂರು, ನಾಲ್ಕು ಗಂಟೆಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿದೆ.
ಈಗ ಭದ್ರ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡ ಸುಮಾರು 15 ವರ್ಷದ ಈ ಗಂಡಾನೆ ಸಕಲೇಶಪುರದಲ್ಲಿ ಈಚೆಗೆ ಕಂಡುಬಂದಿತ್ತು. ಅಲ್ಲದೇ ಆನೆಯ ಕಾಲ್ತುಳಿತಕ್ಕೂ ಜನ ಸತ್ತಿದ್ದಾರೆಂಬ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಭದ್ರಾ ಆಭಯಾರಣ್ಯಕ್ಕೆ ತಂದು ಬಿಡಲಾಗುತ್ತಿದ್ದು ಅದನ್ನು ಸರಿಯಾಗಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪುಂಡಾಟದ ಆನೆ ಊರಿಗೆ ನುಗ್ಗುತ್ತಿದ್ದರು ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಹಿಮ್ಮೆಸುವಲ್ಲಿ ಸೋಲುತ್ತಿದ್ದು,ಜೊತೆಗೆ ಉಡಾಫೆ ಧೋರಣೆ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.
* ಆನೆ ನಡೆದ ದಾರಿ
ಮುತ್ತಿನಕೊಪ್ಪದ ಮೂಲಕ ತುಂಗಾ ನದಿ ದಾಟಿ ಮುಡುಬ ಪೆಟ್ರೋಲ್ ಬಂಕ್, ಉಳ್ಳೂರು ಘಟ್ಟ, ಮಣಿವೆ, ಉಳ್ಳೂರು, ಕುಚ್ಚಲು, ಬಾಳೇಗುಡ್ಡ ಕಾಡಿನಲ್ಲಿ ನಿದ್ರೆ, ಹಿರೇಬೈಲು, ಸೀಕೆ, ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ, ಕೋಣಂದೂರು, ಅರಳಸುರಳಿ, ನೊಣಬೂರು, ಗುಡ್ಡಕೊಪ್ಪ, ಕಲ್ಲುಂಡಿ, ಪಟಮಕ್ಕಿ. ಇದೀಗ ಗುಡ್ಡೆಕೊಪ್ಪ ಬಳಿ ಕಾಣಿಸಿಕೊಂಡಿದೆ.