ಅಕ್ರಮ ಗೋಸಾಗಾಟ ಎನ್.ಆರ್ ಪುರದಲ್ಲಿ ಇಬ್ಬರ ಬಂಧನ
* ಹಲವು ದಿನಗಳಿಂದ ಇದೇ ವಾಹನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳ
* ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ತಪಾಸಣೆ
NAMMMUR EXPRESS NEWS
ಎನ್.ಆರ್ ಪುರ: ಹಲವು ದಿನಗಳಿಂದ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವಾಹನವನ್ನು ಇಂದು ತಪಾಸಣೆ ನಡೆಸಿ ಗೋಸಾಗಾಟ ಮಾಡುತ್ತಿದ್ದ ವಾಹನ ಮತ್ತು ಇಬ್ಬರನ್ನು ಬಂಧಿಸಿರುವ ಘಟನೆ ತಾಲೂಕಿನ ಬಿ ಎಚ್ ಕೈಮರದಲ್ಲಿ ನಡೆದಿದೆ.
ಸದ್ಯದ ಮಾಹಿತಿ ಪ್ರಕಾರ ಗೋವುಗಳನ್ನು ತಾಲೂಕಿನ ದಾವಣದಿಂದ ತರೀಕೆರೆಗೆ ಸಾಗಿಸಲಾಗುತ್ತಿತ್ತು, ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಎನ್.ಆರ್ ಪುರ ಪೊಲೀಸರು ಬಿ.ಎಚ್ ಕೈಮರದಲ್ಲಿ ವಾಹನ ತಡೆದು ತಪಾಸಣೆ ನಡೆಸಿರುತ್ತಾರೆ, ಈ ಸಂದರ್ಭದಲ್ಲಿ ವಾಹನದಲ್ಲಿ ಗೋಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ವಾಹನದಲ್ಲಿ 6 ಗೋವುಗಳಿದ್ದು ಅವುಗಳನ್ನು ರಕ್ಷಿಸಲಾಗಿದೆ.
ತಾಲೂಕಿನ ದಾವಣ ಮಂಜು ಎಂಬುವವನು ಅನೇಕ ದಿನಗಳಿಂದ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದು,ಈ ಕೃತ್ಯದಲ್ಲಿ ಇವರ ಮೇಲೆ ಬಜರಂಗದಳ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದು,ಕೂಡಲೇ ದಾವಣ ಮಂಜುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಪೊಲೀಸ್ ಇಲಾಖೆಗೆ ಎನ್.ಆರ್ ಪುರ ಬಜರಂಗದಳ ಒತ್ತಾಯಿಸಿದೆ.
* ಸ್ಥಳೀಯ ಕಸಾಯಿಖಾನೆ ಗೋವುಗಳ ಸಾಗಾಟದ ಅನುಮಾನ
ತಾಲೂಕಿನಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಗೋಸಾಗಾಟವು ಯಾವುದೇ ಭಯವಿಲ್ಲದೇ ಸಾಗುತ್ತಿದೆ. ಇಂದು ನಡೆಸಲಾಗುತ್ತಿದ್ದ ಗೋಸಾಗಾಟ ಸ್ಥಳೀಯ ಕಸಾಯಿಖಾನೆಯೊಂದಕ್ಕೆ ಗೋವುಗಳನ್ನು ಪೂರೈಸಲಾಗುತ್ತಿತ್ತು ಎಂಬ ಹಲವು ಅನುಮಾನಗಳನ್ನು ಎನ್.ಆರ್ ಪುರ ಬಜರಂಗದಳ ವ್ಯಕ್ತಪಡಿಸಿದೆ. ಕಳೆದೆರಡು ದಿನಗಳಿಂದ ಕೆಲವರ ಚಲನವಲನಗಳನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಹಾಗೂ ಬಂಧಿತ ಆರೋಪಿಯು ಸ್ಥಳೀಯ ವ್ಯಕ್ತಿಯೋರ್ವರಿಗೆ ಮಾಡಿದ ಮೊಬೈಲ್ ಕಾಲ್‌ನ ಆಧಾರದ ಮೇಲೆ ಬಜರಂಗದಳದ ಕಾರ್ಯಕರ್ತರು ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.