ತೀರ್ಥಹಳ್ಳಿಯಲ್ಲಿ ಯಶಸ್ವಿ ಸೌಹಾರ್ದ ಇಫ್ತಿಯಾರ್ ಕೂಟ!
– ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮ ಗುರುಗಳ ಶಾಂತಿ ಸಂದೇಶ
– ಎಲ್ಲಾ ಸಮುದಾಯದವರಿಗೂ ಇಫ್ತಿಯಾರ್ ಕೂಟದಲ್ಲಿ ಭೋಜನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಾಜ್ಯದಲ್ಲೇ ವಿಶೇಷ ಎಂಬಂತೆ ಮುಸ್ಲಿಂ ಬಾಂಧವರಿಂದ ಸೌಹಾರ್ದ ಇಫ್ತಿಯಾರ್ ಕೂಟ ಯಶಸ್ವಿಯಾಗಿದ್ದು ನೂರಾರು ಮಂದಿಗೆ ಊಟ ಉಪಚಾರ ಮಾಡಲಾಯಿತು.
ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳ ನೇತೃತ್ವದಲ್ಲಿ ಎಲ್ಲಾ ಸಮುದಾಯದವರು ಸೇರಿ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದರು. ತೀರ್ಥಹಳ್ಳಿ ವರ್ತಕರ ಸಂಘದಿಂದ ಮೂರು ಧರ್ಮದ ಗುರುಗಳಿಂದ ಕೇಕ್ ಕತ್ತರಿಸಿ ಶಾಂತಿ ಸಂದೇಶ ಮೆರೆಯಲಾಯಿತು. ತೀರ್ಥಹಳ್ಳಿ ಮಸೀದಿ ಧರ್ಮ ಗುರು, ಚರ್ಚ್ ಧರ್ಮಗುರು, ಹಿಂದೂ ಮಠದ ಧರ್ಮ ಗುರುಗಳು ಪರಸ್ಪರ ಒಬ್ಬರಿಗೊಬ್ಬರು ಕೇಕ್ ತಿನ್ನಿಸಿ, ಭಾವೈಕ್ಯತೆಯಿಂದ ಹರ್ಷ ವ್ಯಕ್ತಪಡಿಸಿದರು. ಹಾಗೆಯೇ ಒಟ್ಟಿಗೆ ಕೂತು ಇಫ್ತಿಯಾರ್ ಕೂಟದ ಭೋಜನವನ್ನು ಸವಿದರು. ಇಫ್ತಿಯಾರ್ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಲಾಗಿತ್ತು. ಈ ಇಫ್ತಿಯಾರ್ ಕೂಟದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತಾಲೂಕು ದಂಡಾಧಿಕಾರಿ ರಂಜಿತ್ ಎಸ್, ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷರಾದ ಗೀತಾ ರಮೇಶ್, ನ್ಯಾಷನಲ್ ಸಮೂಹ ಸಂಸ್ಥೆಯ ಅಬ್ದುಲ್ ರೆಹಮಾನ್, ಹಾಗೂ ವರ್ತಕ ಸಂಘದ ಅಧ್ಯಕ್ಷ ಡಾನ್ ರಾಮಣ್ಣ, ಚೈತನ್ಯ ಜವಳಿ, ನಾಗರಾಜ್, ಮೂಡ್ ರಾಮದಾಸ್, ಮತ್ತು ಮೂರು ಧರ್ಮದ ಬಾಂಧವರು ಉಪಸ್ಥಿತಿಯಲ್ಲಿದ್ದರು. ಅಸಿಫ್, ರಿಯಾಜ್, ಜಾವೆದ್, ನಿವೃತ್ತ ಪಿಡಿಓ ಮಹಮದ್, ಫರ್ವೀಜ್ ಸೇರಿದಂತೆ ಹಲವರು ಇದ್ದರು.
ಮಸೀದಿ ರಸ್ತೆ ಅಲಂಕಾರ: ಅಲ್ಲೇ ಭೋಜನ: ತೀರ್ಥಹಳ್ಳಿ ಮಸೀದಿ ರಸ್ತೆಯಲ್ಲಿ ಚಾಮುಂಡೇಶ್ವರಿ ಸೌಂಡ್ಸ್ ಅಂಡ್ ಲೈಟ್ಸ್ ಸಂಸ್ಥೆ ತಪಸ್ವಿ ನೇತೃತ್ವದಲ್ಲಿ ಅತ್ಯಂತ ವಿಶೇಷ ಬೆಳಕಿನ ಅಲಂಕಾರ ಮಾಡಿತ್ತು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಸಾದಿ ಅವರು ಮೆಕ್ಕಾ ಪ್ರವಾಸದಲ್ಲಿ ಇರುವುದರಿಂದ ಅವರು ಆಗಮಿಸಿರಲಿಲ್ಲ. ಓಟ್ಟಿನಲ್ಲಿ ಸಹಬಾಳ್ವೆ ಸೌಹಾರ್ದತೆಗೆ ತೀರ್ಥಹಳ್ಳಿ ಮತ್ತೆ ಸಾಕ್ಷಿಯಾಯಿತು
