ಕರಾವಳಿ ಟಾಪ್ ನ್ಯೂಸ್
ಮಂಗಳೂರು: ರೈಲಿನಿಂದ ಬಿದ್ದ ಯುವಕ 15 ಗಂಟೆಗಳ ಬಳಿಕ, ನರಳಾಟದ ಸ್ಥಿತಿಯಲ್ಲಿ ಪತ್ತೆ!
– ಕೋಟ: ಹೆದ್ದಾರಿಯಲ್ಲೇ ಬೈಕ್ ಮೇಲೆರಗಿದ ಜಿಂಕೆ, ಸವಾರಿ ಆಸ್ಪತ್ರೆಗೆ ದಾಖಲು!
– ಬೈಂದೂರು: ನಿಟ್ಟೆ ಕಾಲೇಜಿಗೆ ಹೋಗಿದ್ದ ಮಗ ನಾಪತ್ತೆ!
NAMMUR EXPRESS NEWS
ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಬಿದ್ದು, 15 ಗಂಟೆ ಬಳಿಕ ಪತ್ತೆಯಾದ ಘಟನೆ ಸವಣೂರಿನಲ್ಲಿ ನಡೆದಿದೆ.
ಮಾ 25ರಂದು ರೈಲಿನಲ್ಲಿ ಕುಮಟದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯ ಕುಮಾರ್ ರಾತ್ರಿ 11 ಗಂಟೆ ವೇಳೆಗೆ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಬಿದ್ದಿದ್ದಾರೆ. ರಾತ್ರಿ ವೇಳೆ ಯುವಕ ರೈಲಿನಿಂದ ಬೀಳುವುದನ್ನು ಸಹ ಪ್ರಯಾಣಿಕರು ಗಮನಿಸಿದ್ದು ನೆಟ್ಟಣ ತಲುಪಿದ ವೇಳೆ ರೈಲ್ವೆ ಮಾಸ್ಟರ್ ಗಮನಕ್ಕೆ ತಂದಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ ಹೀಗಾಗಿ ಪತ್ತೆ ಕಾರ್ಯವೂ ಸಾಧ್ಯವಾಗಿರಲಿಲ್ಲ.
ಮಾ.26ರಂದು ಸುಣ್ಣಾಜೆ ಬಳಿ ಕೊಳವೆಬಾವಿಯ ಪಂಪ್ ಎಳೆಯಲು ಹೋಗಿದ್ದ ದಿನೇಶ್ ಆಚಾರ್ಯ, ಸಂತೋಷ್ ಅಲೆಕ್ಕಾಡಿ ಪ್ರತಾಪ್ ಪರಣೆ ಮತ್ತಿತರರಿಗೆ ಮೋರಿ ಸಮೀಪ ವ್ಯಕ್ತಿ ನರಳುವುದು ಕೇಳಿಸಿತು. ತತ್‌ಕ್ಷಣ ಈ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸಚಿನ್ ಸವಣೂರು ಅವರ ಗಮನಕ್ಕೆ ತಂದರು. ಅವರು ಆಗಮಿಸಿ ಯುವಕನನ್ನು ಪತ್ತೆಹಚ್ಚಿ ಆರೈಕೆ ಮಾಡಿ ವಿಚಾರಿಸಿದಾಗ, ಆತ ಕುಮಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಗ್ಗೆ ತಿಳಿಯಿತು. ಬಳಿಕ ಪೊಲೀಸರ ಸೂಚನೆಯಂತೆ ಯುವಕನನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮುಖ ಹಾಗೂ ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ.
– ಕೋಟ: ಹೆದ್ದಾರಿಯಲ್ಲೇ ಬೈಕ್ ಮೇಲೆರಗಿದ ಜಿಂಕೆ, ಸವಾರಿ ಆಸ್ಪತ್ರೆಗೆ ದಾಖಲು!
ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುತ್ತಿದ್ದ ಜಿಂಕೆಯೊಂದು ಅದೇ ಹೆದ್ದಾರಿಯಲ್ಲಿ ಬಂದ ಬೈಕ್ ಸವಾರನ ಮೇಲೆರಗಿದ ಅಪರೂಪದ ಘಟನೆ ಕೋಟದ ಸಾಲಿಗ್ರಾಮದಲ್ಲಿ ನಡೆದಿದೆ.
ಕುಂಭಾಶಿ ನಿವಾಸಿ ಮಹೇಶ್ ಮೇಲೆ ಜಿಂಕೆ ಎರಗಿದೆ. ಇವರು ಬೈಕಿನಿಂದ ಆಯ ತಪ್ಪಿ ಬಿದ್ದು ಗಾಯಗೊಂಡು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಸಂತೆಕಟ್ಟೆಯಿಂದ ತೆಕ್ಕಟ್ಟೆ ಕಡೆಗೆ ಕೆಲಸಕ್ಕೆ ಬರುತ್ತಿದ್ದಾಗ ಸಾಲಿಗ್ರಾಮ ಡಿವೈನ್ ಪಾರ್ಕ್ ಸಮೀಪ ಈ ಘಟನೆ ನಡೆದಿದೆ.
ಜಿಂಕೆಗೆ ಯಾವುದೇ ರೀತಿಯ ಗಾಯಗಳಾಗದೆ ಅದು ಎಸ್ಕೇಪ್ ಆಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ನಿಟ್ಟೆ ಕಾಲೇಜಿಗೆ ಹೋಗಿದ್ದ ಮಗ ನಾಪತ್ತೆ!
ಬೈಂದೂರು: ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಎಲ್ ಎಸ್ ಐ ಪದವಿ ವಿದ್ಯಾರ್ಥಿ ಅಭಿನಂದನೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಾ.22ರಂದು ಮಧ್ಯಾಹ್ನ ಅಭಿನಂದನೆ ಬೈಂದೂರಿನ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋಗಿದ್ದು, ಎರಡು ಬಾರಿ ಮನೆಗೆ ಫೋನ್ ಮಾಡಿದ್ದು, ನಂತರ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಂದೆ ಮಹಾಬಲೇಶ್ವರ ಅವರು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಕುರಿತು ವಿಚಾರಿಸಿದಾಗ, ಕಾಲೇಜಿಗೆ ರಜೆ ಹಾಕಿ ತೆರಳಲು ತಿಳಿಸಿದ್ದರು.
ಅಭಿನಂದನೆ ರವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮಗ ಕಾಣೆಯಾಗ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.