ಕುಡುಮಲ್ಲಿಗೆ ಬಳಿ ಆಕ್ಸಿಡೆಂಟ್ – ಆಕ್ಸಿಡೆಂಟ್..!
– ದಿನ ಒಂದಲ್ಲ ಒಂದು ಅಪಘಾತ: ಅನೇಕರಿಗೆ ಗಾಯ
– ಗ್ಯಾಸ್ ತುಂಬಿದ ಲಾರಿ ಪಲ್ಟಿ: ತಪ್ಪಿದ ಭಾರೀ ಅನಾಹುತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಾಳಗಾರು ಕುಡುಮಲ್ಲಿಗೆ ಭಾಗದಲ್ಲಿ ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತವೆ. ಕಳೆದ ಒಂದು ವಾರದಿಂದ ಐದಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ. ಆದರೆ ವಾಹನಗಳು ನುಜ್ಜು ಗುಜ್ಜಾಗುವುದು ಹಾಗೂ ಒಬ್ಬರ ಕಾಲು ಕೂಡ ತುಂಡಾಗಿದೆ. ಆದರೆ ವಾಹನಗಳ ಮಿತಿಮೀರಿದ ವೇಗದಿಂದಾಗಿ ಪದೇಪದೇ ಅಪಘಾತಗಳು ಸಂಭವಿಸುತ್ತವೆ. ಜೊತೆಗೆ ಸ್ಥಳೀಯರಿಗೆ ಕೂಡ ತೊಂದರೆ ಹೆಚ್ಚಾಗಿದೆ. ಕುಡುಮಲ್ಲಿಗೆ ಟರ್ನ್ ಅಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದೆ.
ಕುಡುಮಲ್ಲಿಗೆ ಬಳಿ ಗ್ಯಾಸ್ ತುಂಬಿದ ಲಾರಿ ಪಲ್ಟಿ!
ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕುಡುಮಲ್ಲಿಗೆ ತಿರುವಿನಲ್ಲಿ ಗದ್ದೆಗೆ ಪಲ್ಟಿ ಹೊಡೆದಿದೆ. ಶುಕ್ರವಾರ ಮಧ್ಯಾಹ್ನ 1:40 ರ ವೇಳೆಯಲ್ಲಿ ಈ ಘಟನೆ ಜರುಗಿದ್ದು ಶಿವಮೊಗ್ಗದಿಂದ ಮಂಗಳೂರಿಗೆ ಲಾರಿ ಹೋಗುತ್ತಿತ್ತು ಎನ್ನಲಾಗಿದೆ. ಕುಡುಮಲ್ಲಿಗೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿ ಗದ್ದೆಗೆ ಇಳಿದಿದೆ. ಚಾಲಕ ಹಾರಿಕೊಂಡಿದ್ದು ಆತನಿಗೆ ಯಾವುದೇ ತೊಂದರೆ ಆಗಿಲ್ಲ. ಗ್ಯಾಸ್ ಹಂಡೆಗಳು ಕೂಡ ಲಾರಿಯಿಂದ ಹೊರಬಿದ್ದಿದ್ದು ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವೇಗ ನಿಗದಿ ಪಡಿಸಬೇಕು!
ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ನಿಗದಿಪಡಿಸಬೇಕು. ಶಾಲೆಗಳು, ಆಸ್ಪತ್ರೆಗಳು ಹಾಗೂ ಹೆಚ್ಚು ಜನ ಓಡಾಡುವ ಜಾಗಗಳಲ್ಲಿ ವೇಗಮಿತಿಯ ಸೂಚಕಗಳನ್ನು ಅಳವಡಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಬಳಗಾರ್ ನಿಂದ ಕುಡುಮಲ್ಲಿಗೆ ವರೆಗೆ ಕಳೆದ ಒಂದು ವಾರದಲ್ಲಿ ಐದು ಅಪಘಾತಗಳು ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎರಡು ಬೈಕ್ ಹಾಗೂ ಗೂಡ್ಸ್ ನಡುವೆ ಬಾಳಗಾರು ಬಳಿ ಅಪಘಾತ ಸಂಭವಿಸಿದರೆ, ಇನ್ನೊಂದು ಅಪಘಾತ ಕುಡುಮಲ್ಲಿಗೆ ಬಳಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದೆ.
ಮತ್ತೊಂದೆಡೆ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಜೊತೆಗೆ ಮತ್ತಷ್ಟು ಅಪಘಾತಗಳಾದರೂ ಎಲ್ಲೂ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದ್ದು ಜನತೆಗೆ ಭದ್ರತೆ ಭಯ ಉಂಟಾಗಿದೆ. ಹೀಗಾಗಿ ತಕ್ಷಣ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಹೈವೇ ಪ್ರಾಧಿಕಾರ ಈ ಬಗ್ಗೆ ಗಮನಿಸಬೇಕು. ಜನವಸತಿ ಪ್ರದೇಶಗಳಲ್ಲಿ ವೇಗಮಿತಿಯನ್ನು ಅಳವಡಿಸುವುದರ ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ತೀರ್ಥಹಳ್ಳಿ ಹೈವೇಯಲ್ಲಿ ಪದೇ ಪದೇ ಅಪಘಾತ
ತೀರ್ಥಹಳ್ಳಿ ಪಟ್ಟಣದ ಭಾರತಿಪುರದಿಂದ ಗಾಜನೂರುವರೆಗೆ ಇದ್ದು, ಇತ್ತ ತೀರ್ಥಹಳ್ಳಿ ಪಟ್ಟಣದ ರಂಜದಕಟ್ಟೆಯಿಂದ ಆಗುಂಬೆವರೆಗೆ ಇದೆ. ವೇಗದ ಚಾಲನೆಯಿಂದಾಗಿ ಇತ್ತೀಚೆಗೆ ಅನೇಕ ಅಪಘಾತಗಳು ಹೆಚ್ಚಾಗಿದೆ. ಜೊತೆಗೆ ಪ್ರವಾಸಿಗರು ಹೆಚ್ಚಾಗಿರುವುದರಿಂದ ಅವರಿಗೆ ರಸ್ತೆಯ ತಿಳುವಳಿಕೆ ಇಲ್ಲದ ಕಾರಣ ವಾಹನ ಅಪಘಾತ ಹೆಚ್ಚಾಗುತ್ತಿದೆ. ಹೀಗಾಗಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.