ತೀರ್ಥಹಳ್ಳಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ!
– ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಸಂಭ್ರಮದ ಆಚರಣೆ
– ಹಳ್ಳಿ ಹಳ್ಳಿಯಲ್ಲೂ ಭಾರತ್ ಮಾತಾ ಕೀ ಜೈ ಜಯಘೋಷ
– ತೀರ್ಥಹಳ್ಳಿಯಲ್ಲಿ ಸಾಧಕ ಮಕ್ಕಳಿಗೆ ಪುರಸ್ಕಾರ
NAMMUR EXPRESS NEWS
ತೀರ್ಥಹಳ್ಳಿ: ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ತೀರ್ಥಹಳ್ಳಿ ಕಚೇರಿಗಳಿಗೆ ವಿದ್ಯುತ್ ಅಲಂಕಾರ ಮಾಡಿ, ಹಾಗೂ ಶಾಲೆಗಳಲ್ಲಿ ಮಾವಿನ ತೋರಣಗಳನ್ನು ಕಟ್ಟಿ ಗಣ್ಯರ ಸಮ್ಮುಖದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಗಾಂಧೀಜಿ, ಅಂಬೇಡ್ಕರ್ ಅವರ ಫೋಟೋಗೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು. ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಚಂದ್ರಯಾನವನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಇಡೀ ಜಗತ್ತು ಆಗ ನಮ್ಮನ್ನು ನೋಡಿತು. ಈಗ ಸೂರ್ಯನ ಹತ್ತಿರ ಹೋಗುತ್ತಿದ್ದೇವೆ.
ಕೇವಲ ಪೊಲೀಸ್, ಮಿಲ್ಟ್ರಿ ಅಷ್ಟೇ ಅಲ್ಲ, ಭಯೋತ್ಪದನೆಯನ್ನು ಮೆಟ್ಟಿ ನಿಲ್ಲಲು ರಾಷ್ಟ್ರದ ಹಾಗೂ ಸರ್ಕಾರದ ಜೊತೆಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಪ. ಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಭಾರತದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ಪಟ್ಟಣ ಪಂಚಾಯತ್ ನಲ್ಲಿ ಮಹಿಳಾ ಅಧ್ಯಕ್ಷೆಯಾಗಿ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ ಎಂದರು. ನಂತರ ವೇದಿಕೆ ಕಾರ್ಯಕ್ರಮ ನಡೆದಿದ್ದು ಕ್ರೀಡಾಕ್ಷೇತ್ರದಲ್ಲಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಗತಿಪರ ಕೃಷಿಕರನ್ನು ಆಯ್ಕೆಮಾಡಿ 8 ಮಂದಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಮತ್ತು ಎನ್ ಎಸ್ ಎಸ್ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಹಸೀಲ್ದಾರ್ ಜಕ್ಕಣ್ಣ ಗೌಡರ್, ಸಿಇಓ ಶೈಲ, ಬಿಇಓ ಗಣೇಶ, ಮುಖ್ಯಾಧಿಕಾರಿ ಕುರಿಯಾಕೋಸ್, ಡಿವೈಎಸ್ ಪಿ ಗಜಾನನ ವಾಮನ ಸುತಾರ, ನಾಗರಾಜ್ ಶೆಟ್ಟಿ, ಕೃಷಿ ಅಧಿಕಾರಿ ಪ್ರವೀಣ್ ಸೇರಿ ಹಲವರು ಉಪಸ್ಥಿತರಿದ್ದರು. ತೀರ್ಥಹಳ್ಳಿಯ ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಕುವೆಂಪು ವೃತ್ತ ಸೇರಿ ಅನೇಕ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪ ಹಾಕಲಾಗಿತ್ತು. ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್ ಅಲ್ಲೂ ಆಚರಣೆ ಮಾಡಲಾಯಿತು.


