ತೀರ್ಥಹಳ್ಳಿಗೆ ಚಿರತೆ ಬಂತು ಚಿರತೆ!
-ಹೊಸಹಳ್ಳಿ: ಪ್ರತ್ಯಕ್ಷಗೊಂಡ ಚಿರತೆ
– ರಿಪ್ಪನ್ ಪೇಟೆ: ಕೆರೆಗೆ ಬಿದ್ದ ಕಾರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇಷ್ಟು ದಿನ ಕಾಡಾನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದು, ಇದೀಗ ಚಿರತೆಯ ಸರದಿಯಾಗಿದೆ. ಎಂಕೆಬೈಲು ಸಮೀಪದ ಶಂಕರಮನೆ ಎನ್ನುವಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಚಿರತೆಗಳ ಗುಂಪೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ದನ ಕರುಗಳನ್ನು ಬಿಡಲಷ್ಟೇ ಅಲ್ಲದೆ, ಮನುಷ್ಯರು ಕೂಡ ಓಡಾಡಲು ಪ್ರಾಣಭಯ ಎದುರಾಗಿದೆ. ಇನ್ನು ಶಾಲೆಯ ಅವಧಿಯಾಗಿರುವುದರಿಂದ ಮಕ್ಕಳನ್ನು ಕೂಡ ಕಳುಹಿಸಲು ಸಾಧ್ಯವಾಗದಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಚಿರತೆಗಳ ದಾಳಿಯಿಂದಾಗಿ ಹಲವಾರು ಜನ ಪ್ರಾಣ ಕಳೆದುಕೊಂಡಿರುವ ಸಂಗತಿಗಳು ಆಗಾಗ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಆತಂಕದ ಪ್ರಮಾಣ ಅಧಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ರಿಪ್ಪನ್ ಪೇಟೆ: ಕೆರೆಗೆ ಬಿದ್ದ ಕಾರು…!
ರಿಪ್ಪನ್ ಪೇಟೆ: ಅಮ್ಮನಘಟ್ಟ ಜಾತ್ರೆಗೆಂದು ತೆರಳಿದ, ಕುಟುಂಬದ ಮೂವರು ಸದಸ್ಯರು ಮರಳಿ ಬರುವ ಸಂದರ್ಭದಲ್ಲಿ, ಓವರ್ ಟೇಕ್ ಮಾಡಲು ಬಂದ ಮತ್ತೊಂದು ಕಾರನಿಂದ ತಪ್ಪಿಸಿಕೊಳ್ಳಲು ಹೋಗಿ, ಚಿಪ್ಪಿಗನಕೆರೆಗೆ ಬಿದ್ದ ಘಟನೆ, ರಿಪ್ಪನ್ ಪೇಟೆಯ ಹೊಸನಗರ ರಸ್ತೆಯಲ್ಲಿ ನಡೆದಿದೆ.
ಕಾರು ಸಂಪೂರ್ಣವಾಗಿ ಕೆರೆಯ ನೀರಿನಲ್ಲಿ ಮುಳುಗಿದ್ದು, ಚಾಲಕ ಕಾರಿನಿಂದ ಹೊರಬಂದು ಈಜಿಕೊಂಡು ದಡ ಸೇರಿದ್ದಾನೆ. ಕಾರಿನಲ್ಲಿ ಸಹೋದರಿ ಮತ್ತು ತಾಯಿ ಇರುವುದಾಗಿ ತಿಳಿಸಿ ಕಾಪಾಡುವಂತೆ ಸ್ಥಳೀಯರಲ್ಲಿ ವಿನಂತಿಸಿಕೊಂಡಿದ್ದಾರೆ. ಅಷ್ಟು ಹೊತ್ತಿಗಾಗಲೇ ಪ್ರತ್ಯಕ್ಷವಾಗಿ ದೃಶ್ಯವನ್ನು ಕಂಡ, ಕೆರೆಯ ಎದುರಿಗೆ ಇದ್ದ ಗ್ಯಾರೇಜ್ ಮಾಲೀಕರಾದ ಇಮ್ರಾನ್ ಅವರು ಹಗ್ಗ ತಂದು, ಗಿರೀಶ್, ಮುತ್ತಿಲೀಬ್ ಮತ್ತು ಸ್ಥಳೀಯರ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿದ್ದಾರೆ. ಚಾಲಕನ ತಾಯಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಹೊಸನಗರ ರಸ್ತೆಯಿಂದ ಕೇವಲ ಐದು ನಿಮಿಷಗಳ ಅಂತರದಲ್ಲಿರುವ ಶಿವಮೊಗ್ಗ ರಸ್ತೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಚಾಲಕ ಮತ್ತು ಸಹೋದರಿಗೆ ಅದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರ ಮತ್ತು ಹೊಸನಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಪರಿಶೀಲನೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಲು ತಿಳಿಸಿ, ಮುಂದಿನ ಕ್ರಮಗಳನ್ನು ಜರುಗಿಸಲು ರಿಪ್ಪನ್ ಪೇಟೆ ಠಾಣೆಯ ಪೊಲೀಸರಿಗೆ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
