ಕುವೆಂಪು ಅವರ 29ನೇ ವರ್ಷದ ಪುಣ್ಯ ಸ್ಮರಣೆ
– ಕುವೆಂಪು ಅವರ ಸಮಾಧಿಗೆ ಪುಷ್ಪ ನಮನ
– ಯುಗದ ಕವಿ ಜಗದ ಕವಿ ಕುವೆಂಪು ಅವರ ನೆನಪು
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪುರವರು ನಮ್ಮನ್ನಗಲಿ ಇಂದಿಗೆ 29 ವರ್ಷ. ಕುವೆಂಪು ಅವನ್ನ ನೆನೆದು ಪುಷ್ಪ ನಮನ ಮಾಡಲಾಯಿತು. ತೀರ್ಥಹಳ್ಳಿ ತಾಲೂಕಿನ ಕುವೆಂಪು ಅವರ ಮನೆಯ ಬಳಿ ಇರುವ ಅವರ ಸಮಾಧಿಗೆ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಹೂವು ಹಾಕಿ ಪುಷ್ಪ ನಮನ ಮಾಡಲಾಗಿದೆ. ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಖಜಾಂಚಿ ಮನದೇವ್ ದೇವಂಗಿ, ದಯಾನಂದ್ ಹಿರಿಯರಾದ ಕೊಳವರ ಕೆ ಟಿ ನಾರಾಯಣ ಮೂರ್ತಿ, ಪ್ರಮುಖರಾದ ದಿವಾಕರ್ ಹೆಗ್ಡೆ, ಕೃಷ್ಣಮೂರ್ತಿ, ಸುಬೋದ್, ಸುಧಾಕರ್, ಮಂಜುನಾಥ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಇದ್ದರು.
ಕುವೆಂಪು ಅವರ ಪರಿಚಯ
ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್29, 1904ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು. ಇಪ್ಪತ್ತನೆಯ ಶತಮಾನ ಕಂಡ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ‘ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕನ್ನಡ ಸಾಹಿತ್ಯ ಲೋಕದ ಅದಮ್ಯ ಚೇತನ ರಾಷ್ಟ್ರ ಕವಿ ಕುವೆಂಪು ಅವರ ಪುಣ್ಯ ಸ್ಮರಣೆಯ ಗೌರವ ನಮನಗಳು
