Categories
ತೀರ್ಥಹಳ್ಳಿ

ಮಾದರಿ ಆಯ್ತು ತೀರ್ಥಹಳ್ಳಿ ಮಲ್ನಾಡ್ ಕ್ಲಬ್!

ಮಾದರಿ ಆಯ್ತು ತೀರ್ಥಹಳ್ಳಿ ಮಲ್ನಾಡ್ ಕ್ಲಬ್!
– ಮನೋರಂಜನೆ ಜತೆಗೆ ಒಂದಲ್ಲ ಒಂದು ಸಾಮಾಜಿಕ ಕೆಲಸ
– 38 ಗ್ರಾಮ ಪಂಚಾಯಿತಿಗೆ ಪುಸ್ತಕ ವಿತರಣೆ
– 7 ಲಕ್ಷ ಮೌಲ್ಯದ ಪುಸ್ತಕ ಹಂಚಿಕೆ: ಗಣ್ಯರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ಮನೋರಂಜನೆ ಜತೆಗೆ ಒಂದಲ್ಲ ಒಂದು ಸಾಮಾಜಿಕ ಕೆಲಸವನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚಿಗೆ ಮಲ್ನಾಡ್ ಕ್ಲಬ್ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ 38 ಗ್ರಾಮ ಪಂಚಾಯಿತಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ಸುಮಾರು 7 ಲಕ್ಷ ಮೌಲ್ಯದ ಪುಸ್ತಕ ಹಂಚಿಕೆ ಮಾಡಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಪಂಚಾಯಿತಿ, ಮಲ್ನಾಡ್ ಕ್ಲಬ್ ತೀರ್ಥಹಳ್ಳಿ, ಅಜೀಮ್ ಪ್ರೇಮ್ ಜಿ ಫೌಂಡೇಶನ್, ವಿಹಂಗಮ ಪರಿಸರ ಅಧ್ಯಯನ ಕೇಂದ್ರ ಹಾಗೂ ವಿವಿಧ ದಾನಿಗಳ ಸಹಯೋಗದಲ್ಲಿ ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಲೈಬ್ರರಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಓದುವ ಹವ್ಯಾಸ ಬೆಳೆಸೋಣ…

ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ, ಇಲ್ಲಿ ಇರುವವರೆಲ್ಲ ಓದಬೇಕು ಎನ್ನುವುದಕ್ಕಿಂತ ಓದುವವರಿಗೆ ತಲುಪಿಸಬೇಕು ಎಂದರು. ನಮ್ಮ ರಾಜ್ಯದಲ್ಲಿ ಲೈಬ್ರರಿಗೆ ಒಂದು ದಿನದಲ್ಲಿ ಒಬ್ಬರು ಬರದೇ ಇರುವಂತಹ ಲೈಬ್ರರಿಗಳು ಇದ್ದಾವೆ. ಪ್ರತಿಯೊಂದು ಪಂಚಾಯಿತಿಗೆ ಒಂದೊಂದು ಲೈಬ್ರರಿ ಇದೆ. ಒಂದು ಸರಿ ಓದುವ ಹವ್ಯಾಸ ರೂಢಿಸಿಕೊಂಡರೆ ಮತ್ತೆ ಮತ್ತೆ ಓದುತ್ತಿರುತ್ತಾರೆ. ಶಾಲೆಗಳಲ್ಲಿ ಪುಸ್ತಕಗಳನ್ನು ಓದಿಸಲು ಪ್ರಯತ್ನ ಮಾಡಬೇಕು, ಕೆಲವೊಂದು ಶಾಲೆಗಳ ಲೈಬ್ರೆರಿಯಲ್ಲಿ ಪುಸ್ತಕಗಳು ಓರಲೇ ಹಿಡಿದು ಹೋಗಿದೆ. ಶಾಲೆಯಲ್ಲಿಯೇ ಮಕ್ಕಳಿಗೆ ಪುಸ್ತಕ ಓದಿಸದಿದ್ದರೆ ಇನ್ನು ಎಲ್ಲಿ ಓದಿಸಲು ಸಾಧ್ಯ ಎಂದು ಹೇಳಿದರು. ಪುಸ್ತಕಗಳನ್ನು ಓದುವವರಿಗೆ ಒಂದು ಮೆಸೇಜ್ ಕೊಡುವ ಹಾಗೆ 38 ಗ್ರಾಮ ಪಂಚಾಯಿತಿಗಳನ್ನು ಇದನ್ನು ಮಾಡಬೇಕು, ಹೀಗೆ ಮಾಡಿದಾಗ ಲೈಬ್ರರಿ ಕಡೆ ಜನರ ಗಮನ ಬರುತ್ತದೆ ಎಂದು ಗ್ರಂಥಪಾಲಕರಿಗೆ ವಿನಂತಿ ಮಾಡಿದರು.

ತೀರ್ಥಹಳ್ಳಿ ಮಾದರಿ ಆಗಬೇಕು

ಸಹಕಾರಿ ನಾಯಕ ಡಾ. ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ನಾವು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ನಮ್ಮ ತೀರ್ಥಹಳ್ಳಿ ಬೇರೆ ಊರುಗಳಿಗೆ ಮಾದರಿಯಾಗಬೇಕು. ಈ ತಾಲೂಕಿನಲ್ಲಿ ಪುಸ್ತಕಕ್ಕೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುವಂತಹ ವ್ಯಕ್ತಿಗಳು ಇದ್ದಾರೆ. ರಾಮಾಯಣಂ ದರ್ಶನಂ ನಲ್ಲಿ ಮಲೆನಾಡಿನ ಚಿತ್ರಣಗಳನ್ನು ವರ್ಣಿಸಿದ್ದರೆ. ಅಂದಿನ ಮಲೆನಾಡಿನ ಚಿತ್ರಣಗಳನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಒಂದು ಇತಿಹಾಸವಾಗಿ ಉಳಿದಿದೆ. ಆದ್ದರಿಂದ ಇತಿಹಾಸ ಸೃಷ್ಟಿಯಾಗುವುದೇ ಪುಸ್ತಕಗಳಿಂದ ಇಂದು ಹೇಳಲಾಗುತ್ತದೆ ಎಂದು ಹೇಳಿದರು.

ಡಾ.ಜೆ. ಕೆ. ರಮೇಶ್ ಅವರು ಮಾತನಾಡಿ ಪುಸ್ತಕಗಳನ್ನು ಜೀವಂತವಾಗಿ ಇಡುವವರು ಗ್ರಂಥಪಾಲಕರು. ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಮಹತ್ವವಾದದ್ದು, ಹಳ್ಳಿಗಳಲ್ಲಿ ಗ್ರಂಥಾಲಯ ಇದ್ದರೆ ಗ್ರಂಥಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಕಾರ್ಯನಿರ್ವಹಣಾಧಿಕಾರಿಗಳಾದ ಶೈಲಾ ಎನ್ ರವರು ಮಾತನಾಡಿ, ಒಂದು ಅತ್ಯುತ್ತಮ ಕೆಲಸಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನೆಲೆಯಲ್ಲಿ, ಕುವೆಂಪುರವರ ತಾಣದಲ್ಲಿ ಸಾಹಿತ್ಯ ಲೋಕಕ್ಕೆ ಮಹನೀಯರು ಕೊಟ್ಟಂತ ಕೊಡುಗೆಯನ್ನು ಸ್ಮರಿಸುತ್ತ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಮಲ್ನಾಡ್ ಕ್ಲಬ್ ಅಧ್ಯಕ್ಷರಾದ ಜೆ ಟಿ ಸುಂದರೇಶ್, ಮಾತನಾಡಿ ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಿರುವುದು ಬಹಳ ಹೆಮ್ಮೆ ನಮಗೆ. ಕೆಲವೊಂದು ಪುಸ್ತಕಗಳು ತುಂಬಾ ಇಂಟರೆಸ್ಟಿಂಗ್ ಆಗಿದೆ ನಾನು ನಾಲ್ಕು ಐದು ಬಾರಿ ಓದಿರುವ ಪುಸ್ತಕಗಳು ಕೂಡ ಇದ್ದಾವೆ ಎಂದು ಹೇಳಿದರು. ಮುರುಳಿ ಅವರು ಮಾತನಾಡಿ ನಮ್ಮ ಅಜ್ಜ ಕೂಡ ಒಂದು ಲೈಬ್ರರಿಯನ್ನು ಇಟ್ಟುಕೊಂಡಿದ್ದರು ಅದು ಅವರು ಒಂದು ಒಳ್ಳೆಯ ಸ್ಥಾನವನ್ನು ಪಡೆಯಲು ಕಾರಣವಾಯಿತು. ಇವತ್ತಿನ ಕಾಲಘಟ್ಟಕ್ಕೆ ಪುಸ್ತಕಗಳು ಇನ್ನೂ ಓದುವವರು ಸಂಖ್ಯೆ ಕಡಿಮೆಯಾಗಿದೆ.

ಪುಸ್ತಕಗಳ ಅಭಿವೃದ್ಧಿಯನ್ನು ಬೆಳೆಸುವಂತಹ ಕಾರ್ಯಆಗಬೇಕು. ಪ್ರತಿ ಗ್ರಾಮ ಪಂಚಾಯಿತಿನಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಆಚರಿಸುವುದರ ಮೂಲಕ ಪುಸ್ತಕ ಅಭಿವೃದ್ಧಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಮಲ್ನಾಡ್ ಕ್ಲಬ್ ಕಾರ್ಯದರ್ಶಿ ಎಸ್ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಸ್ವಾಗತಿಸಿದರು ಹಾಗೂ ನಾಗರಾಜ್ ಕಾರ್ಯಕ್ರಮವನ್ನು ವಂದಿಸಿದರು. ವಿಹಂಗಮ ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಕಡಿದಾಳ್ ದಯಾನಂದ ಸೇರಿದಂತೆ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಪಿಡಿಒ, ಗ್ರಂಥ ಪಾಲಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.