Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಐವರು ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಂಬಡ್ತಿ!

ತೀರ್ಥಹಳ್ಳಿಯ ಐವರು ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಂಬಡ್ತಿ!
– ಸೇವಾ ಜೇಷ್ಠತೆ ಆಧಾರದ ಮೇಲೆ ಹುದ್ದೆಗೆ
– ಯಾರು ಯಾರು ಮುಂಬಡ್ತಿ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಪ್ರೌಢಶಾಲಾ ಸಹ ಶಿಕ್ಷಕರಾಗಿ ಅಥವಾ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತೀರ್ಥಹಳ್ಳಿ ತಾಲೂಕಿನ ಐವರು ಪ್ರೌಢಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಗ್ರೂಪ್ ಬಿ ಮುಖ್ಯ ಶಿಕ್ಷಕರು ಅಥವಾ ತತ್ಸಮಾನ ಹುದ್ದೆ ಮತ್ತು ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರ ಹುದ್ದೆಗಳಿಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಆರಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಿರಿಯ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಶೋಭನ್ ಅವರಿಗೆ ಭದ್ರಾವತಿಯ ಸಂಚಿಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಶಾಲಾ ಶಿಕ್ಷಣ ಇಲಾಖೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.

ಡಾ.ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕ ರವೀಂದ್ರ ಎಚ್ ಪಿ ರವರಿಗೆ ರಾಮಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಮತ್ತು ಮೇಳಿಗೆ ಸರ್ಕಾರಿ ಪ್ರೌಢಶಾಲೆಯ ಹಿರಿಯ ಕನ್ನಡ ಅಧ್ಯಾಪಕ ಮಾರುತಿ ರವರಿಗೆ ಕಡ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ, ತನಿಕಲ್ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿಜ್ಞಾನ ಶಿಕ್ಷಕಿ ಸುಕೇತರವರಿಗೆ ಭಾವಿಕೈಸರು ಸರ್ಕಾರಿ ಪೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಹಾಗೂ ಡಾ ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಹಿರಿಯ ಕನ್ನಡ ಅಧ್ಯಾಪಕಿ ಸುರೇಖಾ ಅವರಿಗೆ ರಾಮನಗರ ಜಿಲ್ಲೆಯ ಕೈಲಾಂಚ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಆರಗ ಶಾಲೆ ಅಭಿವೃದ್ಧಿಯಲ್ಲಿ ಶೋಭನ್ ಸೇವೆ ಅಪಾರ

ಅರಗ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಹಳೆ ವಿದ್ಯಾರ್ಥಿಗಳ ಜೊತೆಗೆ ಕೈಜೋಡಿಸಿ ಶಾಲೆಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟ ಉತ್ತಮಗೊಳಿಸಲು ಶೋಭನ್ ಪ್ರಯತ್ನಿಸಿದ್ದರು. ಡಾ. ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕರಾಗಿದ್ದ ರವೀಂದ್ರ ತೀರ್ಥಹಳ್ಳಿ ತಾಲೂಕು ಗಣಿತ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸಲು ತಾಲೂಕಿನ ಗಣಿತ ಶಿಕ್ಷಕರ ಜೊತೆಗೆ ಕೈಜೋಡಿಸಿ ತರಬೇತಿ ಕಾರ್ಯಾಗಾರಗಳನ್ನು ಯಶಸ್ವಿಗೊಳಿಸಿದ್ದರು. ಮೇಳಿಗೆ ಸರ್ಕಾರಿ ಪ್ರೌಢಶಾಲೆಯ ಮಾರುತಿ ಉರಗ ಪ್ರೇಮಿಯಾಗಿದ್ದು ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತನಿಕಲ್ ಸರ್ಕಾರಿ ಪ್ರೌಢಶಾಲೆಯ ಶಾಲೆಯ ಹಿರಿಯ ಅಧ್ಯಾಪಕಿ ಸುಕೇತ ರವರು ಈಗಾಗಲೇ ಸೇವೆ ಸಲ್ಲಿಸಿದ ಎಲ್ಲಾ ಶಾಲೆಗಳಲ್ಲಿ ಬೋಧನಾ ಮತ್ತು ಕಲಿಕಾ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ವಿದ್ಯಾರ್ಥಿಗಳ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅನಂತಮೂರ್ತಿ ಪ್ರೌಢಶಾಲೆಯ ಕನ್ನಡ ಆಧ್ಯಾಪಕಿ ಸುರೇಖ ಅವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಗುಣಮಟ್ಟದ ಫಲಿತಾಂಶಕ್ಕೆ ಕಾರಣರಾಗಿದ್ದರು. ಮುಂಬಡ್ತಿಗೊಂಡ ಪ್ರೌಢಶಾಲಾ ಶಿಕ್ಷಕರಿಗೆ ಅವರ ಆತ್ಮೀಯರು, ಹಿತೈಷಿಗಳು ಮತ್ತು ಹಳೆ ವಿದ್ಯಾರ್ಥಿಗಳು , ತಾಲೂಕಿನ ಎಲ್ಲಾ ಪ್ರೌಢಶಾಲಾ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.