ಹೊಸ ಸೇತುವೆಯಲ್ಲಿ ಮೋಜು-ಮಸ್ತಿ: ಐವರ ವಿರುದ್ಧ ಕೇಸ್!
– ಖಡಕ್ ವಾರ್ನಿಂಗ್ ನೀಡಿದ ಡಿವೈಎಸ್ಪಿ ಸುತಾರ: ಸಿಸಿಟಿವಿ ಕಣ್ಗಾವಲು
– ಐದು ಬೈಕ್ ವಶ, ಕೇಸ್ ದಾಖಲು: ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಗೆ ಹೊಸ ಕಳೆ ನೀಡುವ ತೀರ್ಥಹಳ್ಳಿ ಹೊಸ ಸೇತುವೆ ನೋಡಲು ಬಲು ಸುಂದರ. ಇದು ತೀರ್ಥಹಳ್ಳಿಗೆ ಹೆಮ್ಮೆ. ಆದರೆ ಇತ್ತೀಚಿಗೆ ಅನೇಕರು ಈ ಸೇತುವೆ ಜಾಗ ಮತ್ತು ಹೈವೇಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಿಂದ ಬಾಳೆಬೈಲ್ ವರೆಗೆ ಸುಮಾರು 56 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆ ಮತ್ತು ಹೊಸ ತುಂಗಾ ಸೇತುವೆಯನ್ನು ನಿರ್ಮಿಸಲಾಗಿದೆ.
ಈ ಹೆದ್ದಾರಿ ರಸ್ತೆಯಲ್ಲಿ ಕೆಲವರು ಅನಾವಶ್ಯಕವಾಗಿ ಸೇತುವೆ ಮೇಲೆ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಿ ಧೂಮಪಾನ,ಮದ್ಯಪಾನ ಮಾಡುವುದು, ಕಂಠಪೂರ್ತಿ ಮಧ್ಯ ಕುಡಿದು ಮಧ್ಯದ ಬಾಟಲಿ ರಸ್ತೆಯ ಮೇಲೆ ಹಾಕುವುದು ಅದನ್ನು ಒಡೆದು ವಿಕೃತಿ ಮೆರೆದು ಅಮಾನವೀಯತೆ ಪ್ರದರ್ಶನ ಮಾಡುವುದು, ಇತರ ವಾಹನ ಸವಾರರಿಗೆ ಪಾದಚಾರಿಗಳಿಗೆ ಅನಗತ್ಯ ಕಿರಿಕಿರಿ ಉಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದ್ದು,ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಮಾಡಿತ್ತು. ತಕ್ಷಣ ಗಮನ ಹರಿಸಿ ಸೋಮವಾರ ಬೈಕ್ ವೀಲಿಂಗ್, ಹಾಗೂ ಇತರೆ ಮೋಜಿನಲ್ಲಿ ತೊಡಗಿದ್ದ 5 ಮಂದಿ ಮೇಲೆ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಕೇಸು ದಾಖಲಿಸಲಾಗಿದೆ.
ಸೇತುವೆ ಮೇಲೆ ತಪಾಸಣೆ!
ಬಾಳೆಬೈಲು ಹೊಸ ಸೇತುವೆ ಮೇಲೆ ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರ ಮೇಲೆ ಮತ್ತು ಮದ್ಯಪಾನ ಮಾಡುತ್ತಿದ್ದವರು, ಬೈಕ್ ವೀಲಿಂಗ್ ಮಾಡುತ್ತಿದ್ದವರ ವಿರುದ್ಧ ಸುಮಾರು 5 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.
ಅನಗತ್ಯವಾಗಿ ಸೇತುವೆ ಮೇಲೆ ನಿಲ್ಲಂಗಿಲ್ಲ!
ಅನಗತ್ಯವಾಗಿ ಹೊಸ ಸೇತುವೆ ಮೇಲೆ ಸುಖ ಸುಮ್ಮನೆ ವಾಹನಗಳನ್ನು ನಿಲ್ಲಿಸಿಕೊಂಡು ಹೆದ್ದಾರಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಕೊಡುವುದು, ವಾಹನದಲ್ಲಿ ಮದ್ಯಪಾನ, ಧೂಮಪಾನ ಮಾಡುತ್ತ ನಿಲ್ಲುವುದು ಮಾಡುವುದು ಕಂಡು ಬಂದರೆ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ತೀರ್ಥಹಳ್ಳಿ ಪೊಲೀಸರು ಮುಂದಾಗಿದ್ದಾರೆ. ಕೆಲವೆಡೆ ಸಿಸಿಟಿವಿಯನ್ನು ಜೋಡಿಸಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ
ಹೊಸ ಸೇತುವೆ ಮೇಲೆ ಇಂತಹ ಘಟನೆಗಳ ಬಗ್ಗೆ ಜನರ ದೂರು ಹಿನ್ನೆಲೆ ನಮ್ಮೂರ್ ಎಕ್ಸ್ ಪ್ರೆಸ್ ಸೋಮವಾರ ವಿಶೇಷ ವರದಿ ಪ್ರಕಟ ಮಾಡಿತ್ತು. ತಕ್ಷಣ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ತೀರ್ಥಹಳ್ಳಿ ಪೊಲೀಸರು ಖಡಕ್ ಕ್ರಮ ತೆಗೆದುಕೊಂಡಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
