ಗಾಜನೂರು ನವೋದಯ ಶಾಲಾ ಸಂಭ್ರಮ!
– ನವೋದಯ ಶಾಲೆಗಳು ಪ್ರತಿಭೆಗೆ ಅತ್ಯುತ್ತಮ ವೇದಿಕೆ
– ತೀರ್ಥಹಳ್ಳಿ: ದೇವಂಗಿ ಶಾಲೆಗೆ ಉದ್ಯಮಿ ಕೊಡುಗೆ
– ತಾನು ಓದಿದ ಶಾಲೆಗೆ ಕಾಣಿಕೆ ನೀಡಿದ ಲತೇಶ್
NAMMUR EXPRESS NEWS
ಶಿವಮೊಗ್ಗ: ನವೋದಯ ಶಾಲೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಆರಿಸಿ, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಒಳ್ಳೆಯ ಸಂಸ್ಕೃತಿ ಕಲಿಸಿ ದೇಶಕ್ಕೆ ಉತ್ತಮ ನಾಗರಿಕರನ್ನಾಗಿಸುವ ಅತ್ಯುತ್ತಮ ವೇದಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಮಿಲನ ಮತ್ತು 13ನೇ ಬ್ಯಾಚ್‌ನಿಂದ ಬೆಳ್ಳಿಹಬ್ಬ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ರೀತಿಯ ಕಾರ್ಯಕ್ರಮಗಳು ನವೋದಯ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿ. ಇದರಿಂದ ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರ ಆರಿಸಿಕೊಂಡರೆ ತಮಗೆ ಉತ್ತಮ ಭವಿಷ್ಯ ಇದೆ ಎಂಬ ಕಲ್ಪನೆ ಮಕ್ಕಳಿಗೆ ಬರಲಿದೆ ಎಂದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಮಾತನಾಡಿದರು. 13ನೇ ಬ್ಯಾಚ್ ವಿದ್ಯಾರ್ಥಿಗಳು 1.10 ಲಕ್ಷ ರೂ. ವ್ಯಯಿಸಿ ಎರಡು ಶಾಲಾ ಕೊಠಡಿಗಳಿಗೆ ಚಾವಣಿಯ ಸೀಲಿಂಗ್ ನಿರ್ಮಾಣಕ್ಕೆ ಸಹಕರಿಸಿದರು. ಜತೆಗೆ ಬೆಂಗಳೂರಿನ ಖ್ಯಾತ ಪಾದಗಳ ಆರೈಕೆಯ ಸಂಸ್ಥೆಯಿಂದ ಉಚಿತವಾಗಿ ಪಾದಗಳ ತಪಾಸಣೆ, ಅದರ ನಿರ್ವಹಣೆ ಮತ್ತು ಸಮಗ್ರ ಆರೈಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಗಾಜನೂರು ನವೋದಯದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯ ರವಿ, ಉಪಪ್ರಾಚಾರ್ಯ ಜಾನ್ಸನ್ ಪಿ ಜೇಮ್ಸ್, ಶಿಕ್ಷಕ ವಿ.ಎಸ್.ಹೆಗಡೆ, ಮನೋಜ್ ಪವಾಸ್ಕರ್, ರಾಜಕುಮಾರ್ ಕಡೆಮನಿ, ಸುರೇಶ್, ಹಳೆ ವಿದ್ಯಾರ್ಥಿ ಸಂಘ ಮಿಲನದ ಅಧ್ಯಕ್ಷ ತಾರಾನಾಥ್, ಅರುಣ್ ಕುಮಾರ್, ಡಾ. ಸುನಿಲ್ ಕುಮಾರ್, ಎಂ.ಪಿ.ನವೀನ್‌ಕುಮಾರ್, ಪ್ರಕಾಶ್ ಜೋಯ್ಸ್ ಉಪಸ್ಥಿತರಿದ್ದರು.ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿಷಯಗಳ ವಿನಿಮಯ ನಡೆದಿದ್ದು ಮುಂಬರುವ ಮಕ್ಕಳಿಗೂ ಸ್ಪೂರ್ತಿಯಾಗಲಿದೆ.

ದೇವಂಗಿ ಸರ್ಕಾರಿ ಶಾಲೆಗೆ ಶೈಕ್ಷಣಿಕ ಸಾಮಗ್ರಿ ಕೊಡುಗೆ!- ಕೆಸುವಿನ ಮನೆ ಲತೇತ್ ಅವರಿಂದ ಕೊಡುಗೆ
ತೀರ್ಥಹಳ್ಳಿ : ಲಿಯೋನ್ ಸ್ಮಿತ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀಯುತ ಲತೇಶ್ ಕೆ ಸಿ ಇವರು ತೀರ್ಥಹಳ್ಳಿ ತಾಲೂಕು, ಮುತ್ತೂರು ಹೋಬಳಿಯ ವಾಟಗಾರು ಗ್ರಾಮದ ಕೆಸುವಿನ ಮನೆ ದಿವಂಗತ ಚೆನ್ನಯ್ಯಗೌಡರು ಮತ್ತು ಶ್ರೀಮತಿ ಸುಶೀಲಮ್ಮ ನವರ ಮಗನಾಗಿರುತ್ತಾರೆ. ಶ್ರೀಯುತರು ಸುಮಾರು 43 ವರ್ಷಗಳಿಂದ ವಿವಿಧ ರೀತಿಯ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕರ್ನಾಟಕದಾದ್ಯಂತ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿರುತ್ತಾರೆ. ಇವರ ಈ ಸಾಧನೆಗೆ ಯುರೋಪಿಯನ್ ಕಂಟಿನೆಟಲ್ ಯೂನಿವರ್ಸಿಟಿ ಡೆಲ್ವೇರ್ ಯುಎಸ್ಎ ವತಿಯಿಂದ ಡಾಕ್ಟರೇಟ್ ಪದವಿ ಲಭಿಸಿರುತ್ತದೆ. ಅಲ್ಲದೆ ಇಂಡಿಯನ್ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿ ವತಿಯಿಂದ ರಾಷ್ಟ್ರೀಯ ಗೌರವ ಪುರಸ್ಕಾರ ಹಾಗೂ ಇವರ ವೈಯಕ್ತಿಕ ಕಾರ್ಯ ಸಾಧನೆಗಾಗಿ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ನವದೆಹಲಿ ವತಿಯಿಂದ ಪುರಸ್ಕಾರ ಲಭಿಸಿದೆ.
ಇಷ್ಟೆಲ್ಲ ಪದವಿ ಪುರಸ್ಕಾರಗಳನ್ನು ಹೊಂದಿರುವ ಶ್ರೀಯುತರು ತಾವು ಓದಿದ ದೇವಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಯ ಪೋಷಣ ಸಮಿತಿಯ ಅಧ್ಯಕ್ಷರಾದ ಬಳಗಟ್ಟೆ ಗಿರೀಶ್ ಇವರ ಕೋರಿಕೆಯ ಮೇರೆಗೆ 4 ಗ್ರೀನ್ ಬೋರ್ಡ್ ಹಾಗೂ 32 ಕುರ್ಚಿಗಳನ್ನು ನೀಡಿರುತ್ತಾರೆ. ಶ್ರೀಯುತರು ಸ್ಥಳೀಯ ಹಲವಾರು ಶಾಲೆಗಳಿಗೆ ಶೌಚಾಲಯ, ತರಗತಿ ಕೊಠಡಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಸಿ ಕೊಟ್ಟಿರುತ್ತಾರೆ. ಹಾಗೂ ಆಟದ ಸ್ಪರ್ಧೆಗಳಿಗೆ ಹಣಕಾಸಿನ ನೆರವು ನೀಡಿರುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ತಿಳಿಸಿರುವ ವಿದ್ಯಾ ಪೋಷಕರಾದ ಶ್ರೀಯುತರಿಗೆ ದೇವಂಗಿಯ ಪೋಷಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಹಾಗೂ ಶಿಕ್ಷಕರು ವಂದನೆಗಳನ್ನು ತಿಳಿಸಿದ್ದಾರೆ.
