ಹಣಗೆರೆಕಟ್ಟೆಯ ಸರ್ಕಾರಿ ಶಿಕ್ಷಕಿ ಖೈರುನ್ನಿಸಾ ವಯೋ ನಿವೃತ್ತಿ
– ಶಾಲೆಯಲ್ಲಿ 29 ವರ್ಷ ಸುದೀರ್ಘ ಸೇವೆ: ಆಗಸ್ಟಲ್ಲಿ ವಯೋನಿವೃತ್ತಿ
– ನಿವೃತ್ತಿ ಬದುಕು ಸುಖ – ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯಿಂದ ಕೂಡಿರಲೆಂದು ಶುಭ ಹಾರೈಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕಿಯವರಾದ ಶ್ರೀಮತಿ ಖೈರುನ್ನಿಸಾ ಅವರು ಆಗಸ್ಟ್ ತಿಂಗಳಲ್ಲಿ ವಯೋನಿವೃತ್ತಿ ಹೊಂದಲಿದ್ದಾರೆ.
ದಿನಾಂಕ : 08-02-1995ರಂದು ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಹಣಗೆರೆಕಟ್ಟೆ ಇಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಶ್ರೀಮತಿ ಖೈರುನ್ನಿಸಾ ಅವರು ಇದೇ ಶಾಲೆಯಲ್ಲಿ 29 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೂದೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಯಲ್ಲಿ ಹಾಗೂ ಪ್ರಸ್ತುತ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮಾಳೂರು ಇಲ್ಲಿ ನಿಯೋಜನೆಯ ಮೇರೆಗೆ ಕರ್ತವ್ಯ ಸಲ್ಲಿಸುತ್ತಿದ್ದು ಒಟ್ಟಾರೆ 31 ವರ್ಷಗಳ ಸೇವೆಯನ್ನು ಪೂರೈಸಿರುತ್ತಾರೆ.
ಮೂಲತ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಳ ಗ್ರಾಮದ ದಂಪತಿಗಳಾದ ಶ್ರೀಮತಿ ಶಮೀಮ್ ಉನ್ನಿಸಾ ಮತ್ತು ಶ್ರೀ ಅಮೀದ್ ಖಾನ್ ಇವರ ಮಗಳಾಗಿ ದಿನಾಂಕ : 15:08:1965 ರಂದು ಜನಿಸಿದ ಶ್ರೀಮತಿ ಖೈರುನ್ನಿಸಾ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಐಮಂಗಳದಲ್ಲಿ ಪೂರೈಸಿದರೆ, ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಪೂರೈಸಿ ಚಿತ್ರದುರ್ಗದ ಮಹಾರಾಣಿ ಕಾಲೇಜಿನಲ್ಲಿ ಐ. ಟಿ. ಸಿ ಪದವಿ ಪಡೆದಿದ್ದು, ಹಿಂದಿ ಹಾಗೂ ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದಿರುತ್ತಾರೆ.
ಶಾಂತ ಸ್ವಭಾವ ಹಾಗು ಸರಳ ವ್ಯಕ್ತಿತ್ವದ ಇವರು ಅತ್ಯಂತ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ, ಕರ್ತವ್ಯ ನಿರ್ವಹಿಸಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ನೈತಿಕ ಹಾಗು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಲೆಯ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
ಶಾಲಾ ಮಕ್ಕಳನ್ನು ತಮ್ಮ ಸ್ವಂತಃ ಮಕ್ಕಳಂತೆ ಪ್ರೀತಿಸುವ ಇವರು ಮಾತೃ ಹೃದಯಿಗಳಾಗಿದ್ದು, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರೀತಿಗೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ಇವರ ನಿವೃತ್ತಿ ಬದುಕು ಸುಖ – ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯಿಂದ ಕೂಡಿರಲೆಂದು ವಿದ್ಯಾರ್ಥಿ ಬಳಗ, ಶಿಕ್ಷಕ ಬಳಗ, ಪೋಷಕ ಬಳಗ, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
