ಕರವೇಯಿಂದ ಕನ್ನಡ ಬೋರ್ಡ್ ಹೋರಾಟ..!
– ತೀರ್ಥಹಳ್ಳಿಯಲ್ಲಿ ಇಂಗ್ಲಿಷ್ ಫ್ಲೆಕ್ಸ್ ಮಸಿ ಬಳಿದು ಆಕ್ರೋಶ: ಮಸಿ ಬಳಿದಿದ್ದು ಏಕೆ..?
– ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಅಗ್ರಹ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆ ತೀರ್ಥಹಳ್ಳಿ ಇದೀಗ ಕನ್ನಡ ಬೋರ್ಡ್ ಕಡ್ಡಾಯ ಮಾಡಲು ಹೋರಾಟ ಮಾಡುತ್ತಿದೆ. ಬೆಂಗಳೂರಲ್ಲಿ ಈ ಬಗ್ಗೆ ಹೋರಾಟ ಮಾಡುವ ಸಿದ್ಧತೆ ನಡುವೆ ತೀರ್ಥಹಳ್ಳಿಯಲ್ಲಿ ಸಂಪೂರ್ಣವಾಗಿ ಅಳವಡಿಸಿದ್ದ ಇಂಗ್ಲಿಷ್ ಬೋರ್ಡ್ ಒಂದಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕು. ಕರ್ನಾಟಕದಲ್ಲಿ ನೆಲೆಸಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳದೆ ಆಂಗ್ಲಭಾಷೆಯಲ್ಲಿ ತಮ್ಮ ಅಂಗಡಿ ಕಛೇರಿಗಳಲ್ಲಿ ನಾಮಫಲಕ ಗಳನ್ನು ಅಳವಡಿಸುವುದು ಸಹಿಸಲು ಸಾಧ್ಯವಿಲ್ಲ. ಇದೇ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 27ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಸಾವಿರಾರು ಕರವೇ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ವರ್ತಕರಿಗೆ ಎಚ್ಚರಿಕೆ
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಆಂಗ್ಲಭಾಷೆಯ ನಾಮಫಲಕಗಳನ್ನು ಆಳವಡಿಸಿರುವವರು ಕೂಡಲೇ ನಾಮ ಫಲಕವನ್ನು ತೆರವುಗೊಳಿಸದಿದ್ದಲ್ಲಿ ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿಗಳ ಕಚೇರಿ ಮತ್ತು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಕರವೇ ತೀರ್ಥಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರ ಯಡೂರು ತಿಳಿಸಿದ್ದಾರೆ. ಮಲ್ಲಕ್ಕಿ ರಾಘು, ಹರ್ಷೇಂದ್ರ ಕುಮಾರ್, ಶ್ರೀಕಾಂತ್ ಬೆಟ್ಟ ಮಕ್ಕಿ, ಜ್ಯೋತಿ ದಿಲೀಪ್ ಮತ್ತು ಕರವೇ ಕಾರ್ಯಕರ್ತರು ಹಾಗೂ ಪ್ರಮುಖರು ಇದ್ದರು.
ಆಂಗ್ಲ ಭಾಷೆಯ ಬೋರ್ಡಿಗೆ ಕಪ್ಪು ಮಸಿ ಬಳಿದ ಕರವೇ
ತೀರ್ಥಹಳ್ಳಿಯ ಪ್ರತಿಯೊಂದು ಅಂಗಡಿ ಮುಂಗ್ಗಟ್ಟುಗಳಲ್ಲಿ ಕನ್ನಡ ಬೋರ್ಡ್ ಹಾಕಬೇಕು ಎಂಬ ಎಚ್ಚರಿಕೆ ನೀಡಿದ್ದೇವೆ. ಆದ್ರೂ ಪಟ್ಟಣದಲ್ಲಿ ಸಂಪೂರ್ಣ ಆಂಗ್ಲ ಭಾಷೆಯಲ್ಲಿ ಫ್ಲೆಕ್ಸ್ ಹಾಕಿದ್ದು, ಕಪ್ಪು ಮಸಿ ಬಳಿಯುವ ಮೂಲಕ ಈ ಹೋರಾಟಕ್ಕೆ ಚಾಲನೆ ನೀಡಿದ್ದೇವೆ ಎಂದು ಕರವೇ ತಾಲೂಕು ಅಧ್ಯಕ್ಷರಾದ ಸುರೇಂದ್ರ ಯಡೂರು ಹೇಳಿದರು. ಪಟ್ಟಣದ ಗಾಂಧಿಚೌಕದಲ್ಲಿ ಆಂಗ್ಲ ಪದದಲ್ಲಿ ಇದ್ದ ಪ್ಲೆಕ್ಸ್ ವೊಂದಕ್ಕೆ ಕಪ್ಪು ಮಸಿ ಬಳಿದು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ತೀರ್ಥಹಳ್ಳಿಯಲ್ಲಿ ಆಂಗ್ಲ ಭಾಷೆಯಲ್ಲಿರುವ ಬೋರ್ಡ್ ಗಳಿಗೆ ಮಸಿ ಬಳಿಯುವ ಕಾರ್ಯಕ್ರಮ ಮಾಡಲಿದ್ದೇವೆ ಎಂದರು . ಈಗಾಗಲೇ ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು ಅದರ ಬಗ್ಗೆ ಗಮನವಹಿಸಿಲ್ಲ. ಇನ್ನು ಮುಂದೆಯೂ ಸರಿಪಡಿಸದಿದ್ದರೆ ತಾಲೂಕು ಕಚೇರಿ ಎದುರು ಹಾಗೂ ಪಟ್ಟಣ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನೆಡೆಸಲಿದ್ದೇವೆ. ಇನ್ನು ಮುಂದೆ ಆಂಗ್ಲ ಭಾಷೆಯ ಬೋರ್ಡ್ ಇದ್ದರೆ ಮಸಿ ಬಳಿಯುವ ಕೆಲಸ ಪ್ರತಿದಿನ ನಡೆಯುತ್ತದೆ ಎಂದರು.

ಕನ್ನಡ ಮಾತನಾಡದ ಬ್ಯಾಂಕ್ ಸಿಬ್ಬಂದಿಗೆ ತರಾಟೆ!
ಬ್ಯಾಂಕ್ ಗಳಲ್ಲಿ ಕೆಲಸ ನಿರ್ವಹಿಸುವ ಬೇರೆ ಭಾಷೆಯ ಸಿಬ್ಬಂದಿ ಇಲ್ಲಿನ ಜನರಿಗೆ ಗೌರವ ಕೊಡುತ್ತಿಲ್ಲ. ಕೆನರಾ, ಕರ್ನಾಟಕ, ಹಾಗೂ ಕಾರ್ಪುರೇಶನ್ ಬ್ಯಾಂಕ್ ಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದೇವೆ. ಬೇರೆ ಭಾಷೆ ಹಳ್ಳಿಯ ಜನರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಎಲ್ಲಾ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲೇ ಮಾತನಾಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾದ ಮಂಡ್ಯ ಯುವಕರು!
ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕದಲ್ಲಿ ಕರವೇ ಪ್ರತಿಭಟನೆ ನಡೆಸುವ ವೇಳೆ ಪ್ರವಾಸಕ್ಕೆ ಬಂದಿದ್ದ ಮಂಡ್ಯದ ಯುವಕರು ಕನ್ನಡದ ಶಾಲು ಹಾಕಿಕೊಂಡು ಪ್ರತಿಭಟನೆಗೆ ಸಾಥ್ ನೀಡಿದರು ಈ ವೇಳೆ ರೇವಣ್ಣ ಕುಮಾರ್ ಎಂಬುವರು ಮಾತನಾಡಿ ಹೊರಗಡೆ ಇಂದ ಕರ್ನಾಟಕಕ್ಕೆ ಬರುತ್ತಾರೆ. ಬರಲಿ ಇಲ್ಲಿ ಬದುಕನ್ನ ಕಟ್ಟಿಕೊಳ್ಳಲಿ. ಇಲ್ಲಿ ಬಂದವರು ಕನ್ನಡವನ್ನು ಕಲಿತು ಕನ್ನಡದ ಸಂಸ್ಕೃತಿಯನ್ನು ಉಳಿಸಬೇಕು. ಮೊದಲಿಗೆ ಕನ್ನಡ, ಇಂಗ್ಲಿಷ್, ಹಿಂದಿ ಇರುತ್ತಿತ್ತು ಈಗ ಹಿಂದಿ, ಇಂಗ್ಲಿಷ್ ಇದೆ,, ಕನ್ನಡ ಇಲ್ಲ. ಕರ್ನಾಟಕದಲ್ಲಿ ಕನ್ನಡದವರು ಉಳಿಯಬೇಕು. ಸರ್ಕಾರ ಈ ಬಗ್ಗೆ ಗಮನಿಸಬೇಕೆಂದರು.
