Categories
ತೀರ್ಥಹಳ್ಳಿ

ಸಮಸ್ಯೆಗಳ ಆಗರವಾದ ಕೋಣಂದೂರು ಪಟ್ಟಣ..!

ಸಮಸ್ಯೆಗಳ ಆಗರವಾದ ಕೋಣಂದೂರು ಪಟ್ಟಣ..! 
– ತೀರ್ಥಹಳ್ಳಿ ತಾಲೂಕಿನ ಅಭಿವೃದ್ಧಿ ಹೊಂದುತ್ತಿರುವ ನಂ. 1 ಗ್ರಾಮ ಪಂಚಾಯತ್
– ಆಡಳಿತದ ಬೇಜವಾಬ್ದಾರಿಗೆ ಜನರ ಹಿತ ಬಲಿ
– ಬಸ್ ನಿಲ್ದಾಣ, ಶೌಚಾಲಯ ಅವ್ಯವಸ್ಥೆ: ಜನರ ಹಿಡಿಶಾಪ!

ವಿಶೇಷ ವರದಿ: ಉಮೇಶ್ ದೇಮ್ಲಾಪುರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಸಿಟಿಯಾಗಿ ಬದಲಾಗುತ್ತಿದೆ. ಇತ್ತೀಚಿನ ದಿನದಲ್ಲಿ ಕೋಣಂದೂರಿನಲ್ಲಿ ಇರದ ಅಂಗಡಿಗಳೇ ಇಲ್ಲ, ಸಿಗದ ವಸ್ತುಗಳೇ ಇಲ್ಲ ಎಂಬುವ ಹಾಗೆ ಅಭಿವೃದ್ಧಿ ಹೊಂದುತ್ತಿದೆ.
ಉತ್ತಮ ರಸ್ತೆ, ಉತ್ತಮ ಉದ್ಯಮ, ಉತ್ತಮ ಜನ ಎಲ್ಲವೂ ಇದೆ. ಹೊರ ಊರುಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದು ಇಲ್ಲಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳಿಗೆ ನೆಲೆಯಾಗಿದೆ ಕೋಣಂದೂರು.

ಗ್ರಾಮಪಂಚಾಯಿತಿ ಬೇಜವಾಬ್ದಾರಿ: ಮೂಲ ಸೌಲಭ್ಯ ಇಲ್ಲ..!

ಕೋಣಂದೂರು ಗ್ರಾಮ ಪಂಚಾಯಿತಿಯ ಬೇಜವಾಬ್ದಾರಿತನದಿಂದ ಕೋಣಂದೂರು ಮೂಲಭೂತ ಸಮಸ್ಯೆಗಳ ಗೂಡಾಗಿ ಪರಿಣಮಿಸುತ್ತಿದೆ. ಇಡೀ ಕೋಣಂದೂರು ಸಿಟಿಯಲ್ಲಿ ಒಂದು ಸಾರ್ವಜನಿಕ ಶೌಚಾಲಯವಿದ್ದು ಅದರೊಳಗೆ ಹೋಗಲು ಕೂಡ ಜನರಿಗೆ ಸಾಧ್ಯವಾಗುತ್ತಿಲ್ಲ ಆ ಶೌಚಾಲಯಕ್ಕೆ ಸರಿಯಾಗಿ ನೀರು ಬರುವುದಿಲ್ಲ. ಅಲ್ಲಿನ ಶೌಚಾಲಯವನ್ನು ಶುದ್ಧಗೊಳಿಸಿ ಅದೆಷ್ಟು ಕಾಲಗಳಾಯಿತೋ ಅಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳೇ ಬಲ್ಲರು…!
ಶೌಚಾಲಯದ ಬಾಗಿಲು ಕೂಡ ಭದ್ರವಾಗಿಲ್ಲ. ಮಳೆಗಾಲದಲ್ಲಿ ಸೋರುವ ಸೂರು,ಹಾಗೆ ಇದು ಶೌಚಾಲಯನೋ ಕಸದ ಗುಂಡಿಗಳ ನಿರ್ಮಾಣ ಮಾಡಿ ಅರ್ಧಕ್ಕೆ ಬಿಟ್ಟು ಹೋಗಿದ್ದಾರೋ ಎಂಬುವುದು ಸಹ ತಿಳಿಯದಂತೆ ಆಗಿದೆ. ಈ ಶೌಚಾಲಯಕ್ಕೆ ನಾಲ್ಕು ದಿನ ಹೋದರೆ ಸಾಕು ಸಾಂಕ್ರಾಮಿಕ ರೋಗ ಕಟ್ಟಿಟ್ಟ ಬುತ್ತಿ.
ಇನ್ನು ಸಾರ್ವಜನಿಕ ಬಸ್ ಸ್ಟ್ಯಾಂಡ್ ರಾಷ್ಟ್ರೀಯ ಹೆದ್ದಾರಿ ಮಾಡುವ ಸಲುವಾಗಿ ಸಿಕೆ ರೋಡ್ ನಲ್ಲಿ ಇರುವ ಬಸ್ ಸ್ಟ್ಯಾಂಡ್ ಒಡೆದು ಹಾಕಿದ್ದರು. ಬಸ್ ಸ್ಟ್ಯಾಂಡ್ ಒಡೆದು ಹಲವು ತಿಂಗಳುಗಳೆ ಕಳೆದರೂ ಬಸ್ ಸ್ಟ್ಯಾಂಡ್ ಪುನಃ ನಿರ್ಮಾಣ ಆಗಿಲ್ಲ. ಜನರು ಬಸ್ ಸ್ಟ್ಯಾಂಡ್ ಇಲ್ಲದೆ ಬಿಸಿಲಲ್ಲಿ ಬೇಸಿಗೆ ಕಾಲ ಕಳೆದರೂ, ಹಾಗೆಯೇ ಮಳೆಗಾಲವನ್ನು ಛತ್ರಿ ಹಿಡಿದು ಕಳೆಯಲಿ ಎಂಬ ಮನಸ್ಥಿತಿಯಲ್ಲಿ ಕೋಣಂದೂರು ಗ್ರಾಮ ಪಂಚಾಯಿತಿ ಇರುವ ಹಾಗಿದೆ. ಈ ಬಗ್ಗೆ ಗಮನ ಕೊಡೋರು ಯಾರು?

ಜನರ ಮನವಿಗೆ ಬೆಲೆ ಇಲ್ಲ..!

ಬಸ್ ನಿಲ್ದಾಣ ಶೌಚಾಲಯ ನಿರ್ಮಾಣಕ್ಕೆ ಗ್ರಾಮದ ಜನರು ಆಟೋ ಚಾಲಕರುಗಳು ಎಷ್ಟು ಬಾರಿ ಪತ್ರಗಳನ್ನು ನೀಡಿದರೂ ಸಹ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಎಂದರೆ ನೀವು ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಮಾಡುವುದು ಯಾಕೆ.? ಜನಗಳು ನಿಮ್ಮನ್ನ ಆರಿಸಿ ಕಳಿಸುವುದಕ್ಕೆ.?
ಕೋಣಂದೂರಲ್ಲಿ ನಾಲ್ಕು ಕಾಲೇಜುಗಳಿವೆ. ಆರರಿಂದ ಏಳು ಶಾಲೆಗಳನ್ನು ಹೊಂದಿದೆ. ಮಂಗಳವಾರ ದಿನ ನಡೆಯುವ ಸಂತೆಯು ತುಂಬಾನೇ ವೈಭವವಾಗಿ ನಡೆಯುತ್ತದೆ. ಪ್ರವಾಸಿ ಮತ್ತು ಆಧ್ಯಾತ್ಮಿಕ ಸ್ಥಳಗಳಿಗೆ ಹಾದುಹೋಗುವ ಮಾರ್ಗ ರಸ್ತೆಗಳನ್ನು ಹೊಂದಿದೆ.
ಇಂತಹ ಊರಿನಲ್ಲಿ ಬಸ್ ಸ್ಟ್ಯಾಂಡ್ ಶೌಚಾಲಯ ಇಲ್ಲ ಎಂದು ಸಾರ್ವಜನಿಕರು ಪರದಾಡುವಂತಾಗಿದೆ.

ಚುನಾವಣೆ ವೇಳೆ ಏನು ಕೇಳುತ್ತೀರಿ…? 

ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ. ನಂತರ ನೀವು ಅದೇ ಸಿ ಕೆ ಸರ್ಕಲ್ ನಲ್ಲಿ ಅದೇ ಬಸ್ ಸ್ಟ್ಯಾಂಡ್ ಮತ್ತು ಶೌಚಾಲಯದ ಕಡೆ ಕೈ ತೋರಿಸಿ ನೀವು ನಮಗೆ ಮತ ಹಾಕಿ ನಾವು ನಿಮಗೆ ಶೌಚಾಲಯ ಬಸ್ ಸ್ಟ್ಯಾಂಡ್ ಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಮತ ಭಿಕ್ಷೆ ಕೇಳಲು ಈ ಪರಿಸ್ಥಿತಿಯನ್ನು ಇಟ್ಟುಕೊಂಡಿದ್ದಿರೋ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇನ್ನಾದ್ರೂ ಇತ್ತ ಗಮನಿಸಿ.. ಇಲ್ಲ ಹೋರಾಟ ಮಾಡುತ್ತೇವೆ ಎಂದು ನೊಂದ ಜನ ಪತ್ರ ಬರೆದು ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.