Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ!

ತೀರ್ಥಹಳ್ಳಿಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ!
– ತಾಲೂಕು ಮಟ್ಟದ ಸಮ್ಮೇಳನಕ್ಕೆ ಮಕ್ಕಳೇ ರೂವಾರಿಗಳು!
– ಕುಮಾರಿ ರಜತ ಡಿ,ಕುಮಾರಿ ಸಾನಿಕ ಎಂ ಹೆಗಡೆ ಅವರಿಗೆ ಜವಾಬ್ದಾರಿ
– ತೀರ್ಥಹಳ್ಳಿ ತಾಲೂಕಿನ ಸಾಧಕ ಮಕ್ಕಳಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವು ದಿನಾಂಕ 3:1:2024 ರಂದು ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಶಾಲಾ ಮಕ್ಕಳಾದ ಕುಮಾರಿ ರಜತ ಡಿ, ಮತ್ತು ಕುಮಾರಿ ಸಾನಿಕ ಎಂ ಹೆಗಡೆ ವಹಿಸಲಿದ್ದಾರೆ. ತಾಲೂಕು ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ, ಕನ್ನಡ ಜಾನಪದ ಪರಿಷತ್ತು ತೀರ್ಥಹಳ್ಳಿ, ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿ ಸಹಯೋಗದೊಂದಿಗೆ, ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಂಸ್ಕೃತ ವೇದಿಕೆ ವತಿಯಿಂದ, ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4:30ರವರೆಗೆ ಈ ಸಮ್ಮೇಳನ ನಡೆಯಲಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಂಡಿದ್ದು, ಈಗಾಗಲೇ ಕಾರ್ಯಕ್ರಮದ ಎಲ್ಲಾ ತಯಾರಿಗಳು ನಡೆಯುತ್ತಿದ್ದು, ನಾವು ಎಲ್ಲಾ ಶಾಲೆಗೂ ಮಾಹಿತಿಯನ್ನು ಕೊಟ್ಟಿದ್ದು ಕಾರ್ಯಕ್ರಮದ ಅಧ್ಯಕ್ಷರು ಮತ್ತು ಗೋಷ್ಠಿ ಅಧ್ಯಕ್ಷರ ಆಯ್ಕೆ ಈಗಾಗಲೇ ಆಗಿದೆ. ರಾಷ್ಟ್ರದಲ್ಲಿ ತೀರ್ಥಹಳ್ಳಿಯು ಎರಡು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಏಕೈಕ ತಾಲೂಕಾಗಿದೆ. ಹಾಗೆಯೆ ಸಾಕಷ್ಟು ಸಾಹಿತ್ಯ ಪ್ರತಿಭೆಗಳು ಇಲ್ಲಿವೆ. ಹಾಗಾಗಿ ಈ ಪ್ರತಿಭೆಗಳಿಗೆ ಪ್ರೇರಣೆಯಾಗುವ ಉದ್ಧೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನಷ್ಟು ಕಾರ್ಯಕ್ರಮದ ಪ್ರಚಾರ ಆಗಲಿ ಮತ್ತು ಈ ಕಾರ್ಯಕ್ರಮದ ಮಹತ್ವವನ್ನು ಎಲ್ಲರೂ ತಿಳಿಯುವಂತಾಗಲಿ ಎಂಬುದೇ ಕಾರ್ಯಕ್ರಮದ ಉದ್ದೇಶ ಎಂದರು.

ಮಹಾಬಲೇಶ್ವರ ಹೆಗಡೆ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲವಾರು ಸಂಘ ಸಂಸ್ಥೆಗಳ ಮತ್ತು ದಾನಿಗಳ ಪ್ರಾಯೋಜಕತ್ವದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು. ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ವಾಗ್ದೇವಿ ಪ್ರೌಢಶಾಲೆಯ ಕು.ಸಾನಿಕ ಎಂ ಹೆಗಡೆ ಹಾಗೂ ಸಮ್ಮೇಳನದ ಉದ್ಘಾಟಕರಾಗಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಕು.ರಜತಾ ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಕುಶಾವತಿಯಿಂದ ಮೆರವಣಿಗೆ

ಜ.3ರ ಬೆಳಿಗ್ಗೆ ಕಾರ್ಯಕ್ರಮವು 8:30 ಕ್ಕೆ ಕುಶಾವತಿ ಪಾರ್ಕಿನಿಂದ ಆರಂಭವಾಗಲಿದ್ದು, ಶಾಲಾ ಮಕ್ಕಳೊಂದಿಗೆ ಮೆರವಣಿಗೆಯ ಮೂಲಕ ಗೋಪಾಲಗೌಡ ರಂಗ ಮಂದಿರ ತಲುಪಿ ನಂತರ ಉದ್ಘಾಟನಾ ಕಾರ್ಯಕ್ರಮ 11 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಾವ್ಯ ಕಲರವ ಕವಿ ಗೋಷ್ಠಿ, ಕಥಾ ಗೋಷ್ಠಿ, ಮತ್ತು ಪ್ರಬಂಧ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಮಹಾಬಲೇಶ್ವರ ಹೆಗಡೆ ಮಾಹಿತಿ ನೀಡಿದರು. ಮಧ್ಯಾಹ್ನ 3:30 ರಿಂದ 4:15ರವರೆಗೆ ಸಮ್ಮೇಳನದ ಸಮಾರೋಪ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿವಿಧ ಗೋಷ್ಠಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಆದೇಶದನ್ವಯ ಹೋಬಳಿ ಹಂತದಲ್ಲಿ ಗೋಷ್ಠಿಗಳನ್ನು ಆಯೋಜಿಸಿ, ಅದರಲ್ಲಿ ಆಯ್ಕೆಯಾದ ಮಕ್ಕಳನ್ನು ತಾಲೂಕು ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಈಗಾಗಲೇ ಶಾಲಾ ಹಂತದಲ್ಲಿ ಗುರುತಿಸಿಕೊಂಡಿರುವ ಮಕ್ಕಳ ಮಾಹಿತಿಗಳನ್ನು ಕಲೆ ಹಾಕಿ, ಅದರಲ್ಲಿ ಉತ್ತಮ ಸಾಧನೆ ಮಾಡಿರುವ ಮಕ್ಕಳನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ನಡೆಸಿ, ಕಾರ್ಯಕ್ರಮದ ಉದ್ಘಾಟಕರು ಸಮ್ಮೇಳನ ಅಧ್ಯಕ್ಷರು ಹಾಗೂ ವಿವಿಧ ಗೋಷ್ಠಿಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಾಧಕ ಮಕ್ಕಳಿಗೆ ಸನ್ಮಾನ

ಮಕ್ಕಳ ಸಮ್ಮೇಳನದಲ್ಲಿ, ತಾಲೂಕಿನ ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಧನೆ ತೋರಿರುವ ಮಕ್ಕಳನ್ನು ಗುರುತಿಸಿ ಅಭಿನಂದಿಸಲು ನಿರ್ಧರಿಸಲಾಗಿದೆ ಮತ್ತು ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಹೋಗಲು ಪ್ರೇರೇಪಣೆ ನೀಡಲಾಗುವುದು. ಅಂತಹ ಸಾಧನೆಗೈದ ಮಕ್ಕಳಿದ್ದಲ್ಲಿ ಅವರ ಸಾಧನೆಯ ಪೂರ್ಣ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರ ಆಗಮನ

ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಅರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್,ಎಂ ಮಂಜುನಾಥಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್, ಮತ್ತು ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಈ ದಿನ ಮಧ್ಯಾಹ್ನ ಬಾಲಕಿಯರ ಪ್ರೌಢಶಾಲೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ, ಗಣೇಶ್ ಮಹಾಬಲೇಶ್ವರ ಹೆಗಡೆ, ನಾಗೇಶ್ ಮುಖ್ಯೋಪಾಧ್ಯಾಯ ರು, ಲೀಲಾವತಿ, ರೇಣುಕಾ, ಧರ್ಮಣ್ಣ, ಟಿ ಕೆ ರಮೇಶ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.