ತುಂಗಾ ನದಿಯಲ್ಲಿ ಲಕ್ಷ ಲಕ್ಷ ಮೀನುಗಳು ಸಾವು!
– ಸಿಬ್ಬಲು ಗುಡ್ಡೆಯ ಮತ್ಸ್ಯಧಾಮದ ಮೀನುಗಳಿಗೆ ಸಂಕಷ್ಟ
– ಶೃಂಗೇರಿ ಭಾಗದಲ್ಲೂ ಜಲಚರಕ್ಕೆ ನೀರಿಲ್ಲ
– ದಿನದಿಂದ ದಿನಕ್ಕೆ ನೀರು ಒಣಗಿ ಬತ್ತಿ ಹೋದ ನದಿ
– ಜಲಚರಗಳ ಅವನತಿ: ಮುಂದೆ ಕಾದಿದೆ ಗಂಡಾಂತರ!
NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ: ತುಂಗಾ ನದಿ ಮಲೆನಾಡಿನ ಜೀವ ನದಿ. ಇಲ್ಲಿ ನದಿ ಮೂಲ ಕೃಷಿ ಮಾತ್ರವಲ್ಲದೆ ಇಡೀ ಜನ ಜೀವನಕ್ಕೆ ಆಸರೆ. ಅಲ್ಲದೆ ಪ್ರಾಣಿ ಪಕ್ಷಿ, ಜಲಚರ,ಜೀವ ವೈವಿದ್ಯತೆಗೆ ಸಾಕ್ಷಿಯಾಗಿದೆ. ಆದರೆ ಇದೀಗ ತುಂಗಾ ನದಿ ನೀರು ಬತ್ತಿರುವುದು ಲಕ್ಷ ಲಕ್ಷ ಜಲ ಸಂತತಿಗೆ ಸಂಕಷ್ಟ ತಂದೂಡ್ಡಿದೆ. ಈ ವರ್ಷ ಮತ್ತು ಕಳೆದ ವರ್ಷ ಮಳೆ ಇಲ್ಲದೆ ನೀರು ಬತ್ತಿ ಲಕ್ಷ ಲಕ್ಷ ಮೀನು ಹಾಗೂ ಜಲಚರಗಳು ಮಾಯವಾಗಿವೆ.
ಶೃಂಗೇರಿಯಲ್ಲೂ ನೀರಿಲ್ಲ!
ರಾಜ್ಯದ ಪ್ರವಾಸಿ ತಾಣದಲ್ಲಿ ಒಂದಾದ ಶೃಂಗೇರಿ ಶಾರದಾಂಬೆ ತಾಣ ಶೃಂಗೇರಿಯಲ್ಲಿ ಕೂಡ ನೀರಿಲ್ಲ. ಈ ಭಾಗದಲ್ಲೂ ತುಂಗೆ ಬತ್ತಿದ್ದಾಳೆ. ಇದರಿಂದ ಮೀನುಗಳು, ಜಲ ಚರಗಳು ಸಾವು ಕಾಣುತ್ತಿವೆ.
ಸಿಬ್ಬಲು ಗುಡ್ಡೆಯ ಮತ್ಸ್ಯಧಾಮದ ಮೀನುಗಳಿಗೆ ಸಂಕಷ್ಟ
ಪ್ರವಾಸಿಗರ ಆಕರ್ಷಕ ತಾಣಗಳಲ್ಲಿ ಒಂದಾಗಿರುವ ಸಿಬ್ಬಲಗುಡ್ಡದ ತುಂಗಾ ನದಿಯಲ್ಲಿರುವ ಮತ್ಸ್ಯಧಾಮದ ಮೀನುಗಳು ನೀರಿನ ಕೊರತೆಯಿಂದ ಬಳಲುತಿದ್ದು ಯಾರೂ ಕೇಳುವವರಿಲ್ಲದಂತಾಗಿದೆ. ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ತುಂಗಾನದಿಯಲ್ಲಿ ನೀರಿನ ಹರಿವು ನಿಂತು ತಿಂಗಳುಗಳೇ ಕಳೆದಿದೆ. ಇದರಿಂದಾಗಿ ವರ್ಷ ಪೂರ್ತಿ ನೀರು ನಿಂತಿರುತ್ತಿದ್ದ ಸಿಬ್ಬಲಗುಡ್ಡದ ಭಾರಿ ಗಾತ್ರದ ಮೀನುಗಳಿರುವ ಜಾಗದಲ್ಲಿ ಮಣ್ಣು ಬಂದು ಕೂತಿದ್ದು ನದಿ ತಳ ಕಾಣುತ್ತಿದೆ. ಮೀನುಗಳ ನಿರಾಳ ಚಟುವಟಿಕೆಗೆ ಕೊರತೆ ಉಂಟಾಗಿದೆ. ಹೀಗಾಗಿ ನದಿಯಲ್ಲಿ ಎಲ್ಲೆಡೆ ಬಂಡೆಗಳೇ ಕಾಣುತ್ತಿದ್ದು ಬಿರು ಬಿಸಿಲಿನ ಬೇಗೆಗೆ ದಿನದಿಂದ ದಿನಕ್ಕೆ ನೀರು ಒಣಗುತ್ತಿರುವುದು ಮೀನಿನ ಸಂತತಿಗೇ ಮಾರಕವಾಗುವ ಆತಂಕವೂ ಎದುರಾಗಿದೆ. ಇದರ ರಕ್ಷಣೆಗೆ ತೀರ್ಥಹಳ್ಳಿ ತಾಲೂಕು ಆಡಳಿತಕ್ಕೆ ನೀಡಿರುವ ಮನವಿಗೂ ಬೆಲೆ ಇಲ್ಲವಾಗಿದೆ.
ರಾಜ್ಯದ ಪ್ರಸಿದ್ಧ ಮೀನುಗಳು ಇಲ್ಲಿವೆ!
ಮಳೆಗಾಲದ ಅವಧಿಯನ್ನು ಹೊರತು ಪಡಿಸಿ ಉಳಿದಂತೆ ವರ್ಷಪೂರ್ತಿ ಈ ಕೇಂದ್ರ ನಾಡಿನಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ. ತುಂಗಾನದಿ ಇಕ್ಕೆಲೆಗಳ ಹಚ್ಚ ಹಸುರಿನ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರು ಹಾಕುವ ಅಕ್ಕಿ ಮಂಡಕ್ಕಿ ಮತ್ತು ತೆಂಗಿನಕಾಯಿ ಚೂರುಗಳಿಗೆ ಎಗರಿ ಹಾತೊರೆಯುವ ಮೀನುಗಳೇ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿವೆ. ಅತ್ಯಂತ ಅಪರೂಪದ ತಳಿಯಾದ ಈ ಮೀನುಗಳು ಶೃಂಗೇರಿ ಶಿಶಿಲ ಸೇರಿ ಕೆಲವೇ ಕಡೆಗಳಲ್ಲಿ ಮಾತ್ರ ಕಾಣುವುದಕ್ಕೆ ಸಾಧ್ಯ ಎಂಬ ಅಭಿಪ್ರಾಯವಿದೆ.
