ತೀರ್ಥಹಳ್ಳಿ ಮೊಗವೀರ ಸಂಘದ ಮಾದರಿ ಕಾರ್ಯಕ್ರಮ!
– ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ವಿದ್ಯಾರ್ಥಿ ವೇತನ
– ಸಮುದಾಯದ ಸಾಧಕರಿಗೆ ಸನ್ಮಾನ: 1 ಲಕ್ಷ ಮೊತ್ತದ ನೋಟ್ ಪುಸ್ತಕ ವಿತರಣೆ
NAMMUR EXPRESS NEWS
ತೀರ್ಥಹಳ್ಳಿ: ಈಗಿನ ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಒಬ್ಬ ಮನುಷ್ಯ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ ಬಹುಮುಖ್ಯ. ಹಾಗಾಗಿ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದರ ಜೊತೆಯಲ್ಲಿ ಮುಖ್ಯವಾಗಿ ಅವರುಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಹೇಳಿದ್ದಾರೆ.
ತೀರ್ಥಹಳ್ಳಿಯ ಮಾಧವ ಮಂಗಲ ಸಭಾಭವನದಲ್ಲಿ ತಾಲ್ಲೂಕು ಮೊಗವೀರ ಮಹಾಜನ ಸಂಘ ತೀರ್ಥಹಳ್ಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ರಿ ಅಂಬಲಪಾಡಿ-ಉಡುಪಿ ಇವರುಗಳು ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, . ಗೌರವ ಸಮರ್ಪಣೆ ಹಾಗೂ ನೋಟ್ಬುಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಮಾರ್ಗದರ್ಶಕರಾದ ನಾಡೋಜ ಜಿ.ಶಂಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅವರ ಮಾರ್ಗದರ್ಶನದಂತೆ ತೀರ್ಥಹಳಿಯಲ್ಲಿಯೂ ಈ ಜನಪರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲೆ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯಂತ್ ಕೋಡಿ ಶಿಕ್ಷಣದ ಮಹತ್ವವನ್ನು ತಿಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಸ್ತಾವಿಕ ಮಾತನಾಡಿದ ತೀರ್ಥಹಳ್ಳಿ ತಾಲ್ಲೂಕು ಮೊಗವೀರ ಮಹಾ ಜನ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮಾಧವ ಮಂಗಲ ಸಭಾಭವನದಿಂದ ಬಂದ ಆದಾಯದಲ್ಲಿ ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೋಟ್ ಬುಕ್ ವಿತರಣೆ, ಆರೋಗ್ಯ ಸುಧಾರಣೆಗಾಗಿ ಸಹಾಯ ಧನ ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ. ಮೊಗವೀರ ಸಮಾಜದವರು ಧಾರ್ಮಿಕ, ಸಾರ್ವಜನಿಕ, ರಾಜಕೀಯ ರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಸರ್ವರ ಸಹಕಾರದಿಂದ ಸುಮಾರು 10 ಕೋಟಿಗೂ ಮೀರಿದ ಆಸ್ತಿಯನ್ನು ಸಮಾಜ ಬಾಂಧವರ ಏಳಿಗೆಗಾಗಿ ಇಟ್ಟಿರುವುದಾಗಿ ಅವರು ಹೇಳಿದರು.
ಸಮಾಜದ ಸಾಧಕರಿಗೆ ಸನ್ಮಾನದ ಹಿರಿಮೆ
ತೀರ್ಥಹಳ್ಳಿಯಲ್ಲಿ ವೈದ್ಯಾಧಿಕಾರಿಯಾಗಿ, ಪ್ರಸ್ತುತ ಶಿವಮೊಗ್ಗ ಜಿಲ್ಲಾ ಪ್ರಮುಖ ಆರೋಗ್ಯಾಧಿಕಾರಿಯಾಗಿರುವ ಡಾ. ನಟರಾಜ್ ಮತ್ತು ಮೊಗವೀರ ಸಮಾಜದವರಾದ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅನ್ವಿತ್, ಮಾಧವ ಮಂಗಲ ಸಭಾಭವನದ ಕಛೇರಿ ಸಹಾಯಕಿ ರಮಾ ಗಣೇಶ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಭಾಭಾವನ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಹಾಗೂ ವಾಹನ ನಿಲುಗಡೆ ಕಾರ್ಯನಿರ್ವಹಿಸು ವವರಿಗೆ ಉಡುಗೊರೆ ನೀಡಲಾಯಿತು.
ಸಭೆಗೂ ಮುನ್ನ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ನಡೆಸಲಾಯಿತು. ಸೊಪ್ಪುಗುಡ್ಡೆ ರಾಘವೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜೇಂದ್ರ ಹಿರಿಯಡ್ಕ, ಡಾ|ನಟರಾಜ್, ಡಾ।।ಅನ್ವಿತ್, ಟಿ.ಆರ್. ಶ್ರೀನಿವಾಸ್, ಶಿವಾನಂದ್, ಮಹಿಳಾ ಘಟಕದ ಭಾಗ್ಯ, ರಾಜೇಶ್ ಹಾಗೂ ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರದ್ಧಾ ಪ್ರಾರ್ಥಿಸಿ, ರಾಜು ಸ್ವಾಗತಿಸಿ, ಭಾಗ್ಯ ನಿರೂಪಿಸಿ, ರಾಜೇಶ್ ವಂದಿಸಿದರು.
