ಡಿ.ಬಿ.ಚಂದ್ರೇಗೌಡರಿಗೆ ನಾಳೆ ನುಡಿ ನಮನ!
– ತೀರ್ಥಹಳ್ಳಿಯ ಗಾಯಿತ್ರಿ ಮಂದಿರದಲ್ಲಿ ಬೆಳಗ್ಗೆ ಕಾರ್ಯಕ್ರಮ
– ಡಿ.ಬಿ.ಚಂದ್ರೇಗೌಡರ ಅಭಿಮಾನಿ ಬಳಗದಿಂದ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರದ ಧೀಮಂತ ರಾಜಕಾರಣಿ ಶಾಸಕಾಂಗದ ನಾಲ್ಕು ಸದನಗಳಲ್ಲೂ ಕಾರ್ಯನಿರ್ವಹಿಸಿರುವ ಮುತ್ಸದ್ದಿ, ಜಾತ್ಯತೀತ ನಿಲುವು, ದ್ವೇಷರಹಿತ ನಡವಳಿಕೆಗಳಿಂದ ಜನ ಮಾನಸದಲ್ಲಿ ನೆಲೆ ಊರಿರುವ ಆದರ್ಶ ಜನಪ್ರತಿನಿಧಿ ಚಂದ್ರೇಗೌಡರ ಅಗಲುವಿಕೆ ನಮಗೆಲ್ಲ ಅತೀವ ನೋವು ತಂದಿದೆ. ತೀರ್ಥಹಳ್ಳಿ ಕ್ಷೇತ್ರದ ಜೊತೆ ಅವರ ಅವಿನಾಭಾವ ಸಂಬಂಧ, ವರಾಹಿ ಮುಳುಗಡೆ ಸಂತ್ರಸ್ತರ ಬಗೆಗಿನ ಅವರ ಕಾಳಜಿ ಅವರನ್ನು ಪ್ರತಾಸ್ಮರಣೆಯಾಗುವಂತೆ ಮಾಡಿದೆ. ಅವರ ದಿವ್ಯಾತ್ಮ ನಮ್ಮನ್ನು ಅಗಲಿದರೂ ಅವರ ನೆನಪು ಸದಾ ನಮ್ಮೊಡನೆ ಇದೆ. ಅವರ ಒಡನಾಡಿಗಳು ಅಭಿಮಾನಿಗಳು ಕಲೆತು ಅವರಿಗೆ ನುಡಿ ನಮನ ಸಲ್ಲಿಸಬೇಕೆಂಬ ಹಲವು ಮನಸ್ಸುಗಳ ತುಡಿತವನ್ನು ಮನಗಂಡು ತೀರ್ಥಹಳ್ಳಿಯಲ್ಲಿ ನವೆಂಬರ್ 17ನೇ ಶುಕ್ರವಾರ ಬೆಳಗ್ಗೆ 10.30 ಕ್ಕೆ ಶ್ರೀ ಗಾಯತ್ರಿ ಮಂದಿರದಲ್ಲಿ ಚಂದ್ರೇಗೌಡರನ್ನು ಸ್ಮರಿಸುವ ಸಲುವಾಗಿ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬುಧವಾರ ತೀರ್ಥಹಳ್ಳಿಯ ಮಯೂರ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಗಿದ್ದು, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ವಿಶ್ವನಾಥ್ ಶೆಟ್ಟಿರವರು ಚಂದ್ರೇಗೌಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಿದ್ದೇವೆ. ಅದರಲ್ಲಿ ವಿಶೇಷವಾಗಿ ಡಿ. ಬಿ. ಸಿ ಅವರ ಜೊತೆ ಸಂಪರ್ಕ ಯಾರು ಇಟ್ಟುಕೊಂಡಿದ್ದರು ಅವರನ್ನು ಹೆಚ್ಚು ಜನರನ್ನು ಕರೆಯುವಂತಹ ಕೆಲಸವನ್ನು ಮಾಡಿದ್ದೇವೆ. ಈ ಹಿಂದೆ ಒಂದು ಸಲ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು ಅದು ವಿಷಯ ಎಲ್ಲರಿಗೂ ತಲುಪಿರಲಿಲ್ಲ ಆದ್ದರಿಂದ ಈ ಬಾರಿ ಎಲ್ಲರನ್ನೂ ಒಂದುಗೂಡಿಸಿ ಮಾಡುವಂತಹ ಚಂದ್ರೇಗೌಡರ ಕೊನೆಯ ಕಾರ್ಯಕ್ರಮ ಎಂದರು. ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಕ್ಷೇತ್ರದ ಎಲ್ಲ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಡಿಬಿಸಿ ಅಭಿಮಾನಿ ಹಿತೈಷಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಪರಿವಾರದ ಪ್ರಮುಖರಾದ ಕೆ ಪ್ರಕಾಶ್ ಶೆಟ್ರು ವಹಿಸಲಿದ್ದು, ನುಡಿ ನಮ್ಮನವನ್ನು ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಸಲ್ಲಿಸಲಿದ್ದಾರೆ ಹಾಗೂ ಕಾರ್ಯಕ್ರಮವು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ರವರ ಉಪಸ್ಥಿತಿಯಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿಕೆ ರಮೇಶ್ ಶೆಟ್ಟಿ, ಹಾಲ್ಗಿ ನಾಗರಾಜ್, ತುಳುನಾಡ ಸಹಕಾರ ಸಂಘದ ಅಧ್ಯಕ್ಷರಾದ ರಾಘು ಶೆಟ್ಟಿ ಮತ್ತು ವಿಲಿಯಂ ಸೇರಿದಂತೆ ಪ್ರಮುಖರು ಇದ್ದರು.
ತಮಗೆಲ್ಲರಿಗೂ ಆತ್ಮೀಯ ಆಹ್ವಾನ
– ಸಂಚಾಲಕರು ಮತ್ತು ಸದಸ್ಯರು, ಡಿ ಬಿ ಚಂದ್ರೇಗೌಡರ ಅಭಿಮಾನಿ ಬಳಗ, ತೀರ್ಥಹಳ್ಳಿ