ಹೋಟೆಲ್, ಕ್ಯಾಂಟೀನ್, ಬೇಕರಿ ಮಾಲೀಕರೊಂದಿಗೆ ಪ.ಪಂ.ಅಧ್ಯಕ್ಷ ಅಸಾದಿ ಸಭೆ
– ಶುಚಿತ್ವ, ಅಡುಗೆ ಮನೆ ಅಡುಗೆ ತಯಾರಕರ ಆರೋಗ್ಯದ ಬಗ್ಗೆ ಗಮನವಿರಲಿ.
– ತೀರ್ಥಹಳ್ಳಿ : ಅಪಾಯಕಾರಿ ಮರಗಳ ತೆರವಿಗೆ ಪಟ್ಟಣ ಪಂಚಾಯ್ತಿ ಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಜೂನ್ 18ರಂದು ತೀರ್ಥಹಳ್ಳಿಯ ಹೋಟೆಲ್, ಬಾರ್ ರೆಸ್ಟೋರೆಂಟ್, ವೈನ್‌ಶಾಪ್, ಕ್ಯಾಂಟೀನ್, ಬೇಕರಿ ಮಾಲೀಕರ ಸಭೆ ಕರೆದು ಕೆಲವೊಂದಿಷ್ಟು ಸಲಹೆಗಳೊಂದಿಗೆ ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಿದರು. ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ನಾಗರಾಜ್, ಆರೋಗ್ಯಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು. ಮಳೆಗಾಲವಾದ್ದರಿಂದ ನೀರು ಕಲುಷಿತವಾಗಿರುತ್ತದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಬಿಸಿ ನೀರನ್ನು ಸರಬರಾಜು ಮಾಡಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳತಕ್ಕದ್ದು. ಕಾರ್ಮಿಕರ ಶುಚಿತ್ವ ಆರೋಗ್ಯದ ಬಗ್ಗೆ ಗಮನ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ಪಟ್ಟಣ ಪಂಚಾಯ್ತಿಯೊಂದಿಗೆ ಸಹಕರಿಸುವಂತೆ ಅಸಾದಿ ಸೂಚಿಸಿದರು. ಪಟ್ಟಣದ ಬಹಳಷ್ಟು ಸಭಾಭವನ, ಚೌಲ್ಟ್ರಿಗಳು ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲ. ಅಲ್ಲಿ ಕಾರ್ಯಕ್ರಮ ನಡೆದಾಗ ಅಕ್ಕಪಕ್ಕದ ಬೀದಿಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕಾರ್ಯಕ್ರಮದ ಸಂದರ್ಭ ಈ ರೀತಿ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುವುದು ಚೌಲ್ಟ್ರಿಯವರ ಜವಾಬ್ದಾರಿಯಾಗಿದೆ. ವಾಹನ ಪಾರ್ಕಿಂಗ್ ಉಸ್ತುವಾರಿಗೆ ವ್ಯಕ್ತಿಗಳನ್ನು ನೇಮಿಸಿ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಆಸಾದಿ ವಿನಂತಿಸಿದರು.
– ತೀರ್ಥಹಳ್ಳಿ : ಅಪಾಯಕಾರಿ ಮರಗಳ ತೆರವಿಗೆ ಪಟ್ಟಣ ಪಂಚಾಯ್ತಿ ಕ್ರಮ
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆ-ಗಾಳಿಗೆ ಮುರಿದು ಬೀಳಬಹುದಾದ ರಸ್ತೆ, ಕಟ್ಟಡ, ಮನೆಗಳ ಆಸುಪಾಸಿನಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಕ್ರಮ ಕೈಗೊಂಡಿದೆ. ಜೂನ್ 19ರಂದು ಪ.ಪಂ.ಕಾರ್ಯಾಲಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮೆಸ್ಕಾಂ ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರೊಂದಿಗೆ ಸಭೆ ನಡೆಸಿದ ಪ.ಪಂ.ಅಧ್ಯಕ್ಷರೆಹಮತ್ ಉಲ್ಲಾ ಅಸಾದಿ ಆದಷ್ಟು ಶೀಘ್ರವಾಗಿ ಅಪಾಯಕಾರಿ ಮರಗಳ ಗುರುತಿಸುವಿಕೆ ಹಾಗೂ ತೆರವುಗೊಳಿಸುವಿಕೆಗೆ ಸೂಚಿಸಿದರು. ಈ ಸಂದರ್ಭ ಪ.ಪಂ.ಉಪಾಧ್ಯಕ್ಷ ಗೀತಾ ರಮೇಶ್, ಮುಖ್ಯಾಧಿಕಾರಿ ನಾಗರಾಜ್ ಹಾಜರಿದ್ದರು.
