ತೀರ್ಥಹಳ್ಳಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ..!
– ಶಾಲಾ- ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ
– ತೀರ್ಥಹಳ್ಳಿಯ ಡಾ. ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: 75 ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಭಾರತೀಯ ಗಣರಾಜ್ಯೋತ್ಸವದ ಮುನ್ನಾದಿನವಾದ ಇಂದು ಶಾಲೆ,ಕಾಲೇಜುಗಳಲ್ಲಿ ಸ್ವಚ್ಛತೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಶಾಲಾ ಕಾಲೇಜುಗಳನ್ನು ಹಾಗೂ ಸರ್ಕಾರಿ ಕಚೇರಿಗಳನ್ನು ಅಲಂಕರಿಸಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳಲ್ಲಿ ದೇಶಾದ್ಯಂತ ಗಣರಾಜ್ಯೋತ್ಸವದ ಮೆರವಣಿಗೆಗಳು ಮತ್ತು ಆಚರಣೆಗಳು ನಡೆಯುತ್ತವೆ. ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಇನ್ನು ಎಲ್ಲೆಡೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇನ್ನು ತೀರ್ಥಹಳ್ಳಿಯಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಆಚರಣೆಯನ್ನು ಬೆಳಗ್ಗೆ 9 ಗಂಟೆಗೆ ಡಾ. ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ, ಯೋಜನೆ ಮತ್ತು ಸಾಂಖ್ಯಾಕ ಇಲಾಖೆ ಸಚಿವರಾದ ಡಿ ಸುಧಾಕರ್, ಶಾಸಕ ಆರಗ ಜ್ಞಾನೇಂದ್ರ ರವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು ಬಿ ವೈ ರಾಘವೇಂದ್ರ, ಶಾಸಕರಾದ ಎಸ್ ಎಲ್ ಭೋಜೇಗೌಡ, ಶಾಸಕರಾದ ಎಸ್ ರುದ್ರೇಗೌಡರು, ಶಾಸಕರಾದ ಭಾರತೀ ಶೆಟ್ಟಿ, ಶಾಸಕರಾದ ಡಿಎಸ್ ಅರುಣ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ ಗಣಪತಿ ರವರು ಆಗಮಿಸಲಿದ್ದಾರೆ.
ಎಲ್ಲೆಡೆ ದೀಪದ ಅಲಂಕಾರ!
ಗಣರಾಜ್ಯ ದಿನದ ಅಂಗವಾಗಿ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಿಗೂ ಹಾಗೂ ಧಾರ್ಮಿಕ ಸಂಸ್ಥೆಗಳಿಗೂ ಜನವರಿ 25-26 ರಂದು ದೀಪಾಲಂಕಾರ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮತ್ತು ಅದಕ್ಕಾಗಿ ಪ್ರತಿ ಜಿಲ್ಲೆಗೆ ಒಂದು ಲಕ್ಷ ರೂಪಾಯಿಗಳ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ.