Categories
ತೀರ್ಥಹಳ್ಳಿ

ವರಮಹಾ ಲಕ್ಷ್ಮಿ ಹಬ್ಬಕ್ಕೆ ದೇಗುಲಗಳಲ್ಲಿ ವಿಶೇಷ ಪೂಜೆ

ವರಮಹಾ ಲಕ್ಷ್ಮಿ ಹಬ್ಬಕ್ಕೆ ದೇಗುಲಗಳಲ್ಲಿ ವಿಶೇಷ ಪೂಜೆ
– ತೀರ್ಥಹಳ್ಳಿ ಮಾರಿಕಾಂಬಾ, ಇಂದಾವರ ಶ್ರೀ ಮಹಾಲಕ್ಷ್ಮಿ ಕಿತ್ತನಗದ್ದೆ ಸಾಂಬಸದಾಶಿವ, ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಹಬ್ಬದ ಆಚರಣೆ
– ಹಳ್ಳಿ ಹಳ್ಳಿಯ ದೇಗುಲದಲ್ಲಿ ವಿಶೇಷ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಗಸ್ಟ್ 25ರ ಶುಕ್ರವಾರತೀರ್ಥಹಳ್ಳಿ ಪಟ್ಟಣದ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ, ವೃತ ಆಚರಣೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಶ್ರೀ ವರಮಹಾ ಲಕ್ಷ್ಮೀ ವಿಶೇಷ ವ್ರತಾಚರಣೆ ನಡೆಯುವುದು, ವಿಶೇಷವಾಗಿ ದೇವಿಯ ಸ್ತುತಿ ಅರ್ಚನೆ ಇರುತ್ತದೆ. ಅಂದು ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಸುಮಂಗಲಿಯರಿಗೆ ಬಾಗಿನ ವಿತರಿಸಲಾಗುವುದು. ಭಾಗವಹಿಸಿದ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತರು ಎಂದಿನಂತೆ ಶ್ರದ್ಧಾ ಭಕ್ತಿಯಿಂದ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.

ಇಂದಾವರದಲ್ಲಿ ವಿಶೇಷ ಪೂಜೆ!

ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪೂಜಾ ಕಾರ್ಯ ಕ್ರಮಗಳು, ವಿಶೇಷವಾಗಿ ದೇವಿಗೆ ಅಭಿಷೇಕ, ದೇವಿಯ ಸ್ತುತಿ ಅರ್ಚನೆ ಹಾಗೂ ಬೆಳಿಗ್ಗೆ 10 ಗಂಟೆಗೆ ಶ್ರೀ ಸೂಕ್ತ ಹೋಮ ಮತ್ತು ಬಾಗಿನ ಪೂಜೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಇರುತ್ತದೆ. ಪ್ರಶಾಂತ, ಪ್ರೇಕ್ಷಣೀಯ ಸ್ಥಳದಲ್ಲಿರುವ ಈ ದೇವಸ್ಥಾನಕ್ಕೆ ತಾವೆಲ್ಲರೂ ಆಗಮಿಸಿ ತನು-ಮನ-ಧನ ಸಹಕಾರ ವನ್ನಿತ್ತು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.

ಕಿತ್ತನಗದ್ದೆ ಸಾಂಬಸದಾಶಿವ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಬಾಗಿನ ಸಮರ್ಪಣೆ

ಕಿತ್ತನಗದ್ದೆ ಸಾಂಬಸದಾಶಿವ, ಮಹಿಷಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಮಹಿಳೆಯರಿಗೆ ಬಾಗಿನ ಸಮ ರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು, ಸುತ್ತಮುತ್ತ ಊರಿನ ಮಹಿಳೆಯರು ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ಸಾಂಬ ಸದಾಶಿವ ದೇವರ ಪ್ರಸಾದ ‘ಮಹಾತಾಯಿ ಮಹಿಷ ಮರ್ದಿನಿ ದೇವಿಯ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ ಪಾವನರಾಗಬೇಕೆಂದು ಶ್ರೀ ಸಾಂಬ ಸದಾಶಿವ ಹಾಗೂ ‘ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ

ತೀರ್ಥಹಳ್ಳಿ ಪಟ್ಟಣದ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಳಿಗ್ಗೆ 9-30ಕ್ಕೆ ಕಲಶ ಸ್ಥಾಪನೆ, ಕುಂಕುಮಾರ್ಚನೆ, ಉಡಿ ತುಂಬುವುದು, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂಜೆ 5-30ರಿಂದ ರಾತ್ರಿ 8ಗಂಟೆಯವರೆಗೆ ಕುಂಕುಮಾರ್ಚನೆ, ಉಡಿ ತುಂಬುವುದು, ಸುಮುಖ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ಭಜನೆ ಸೇರಿದಂತೆ ಶ್ರೀ ವರಮಹಾಲಕ್ಷ್ಮೀ ವಿಶೇಷ ವ್ರತಾಚರಣೆ ನಡೆಯುವುದು. ಭಕ್ತಾದಿಗಳು ಎಂದಿನಂತೆ ಶ್ರದ್ದಾಭಕ್ತಿಯಿಂದ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.