– ಶಿಕ್ಷಕ ಕೃಷ್ಣಮೂರ್ತಿ ನಾಯಕ್ ಮೆರವಣಿಗೆ ಮಾಡಿ ಬೀಳ್ಕೊಡುಗೆ..!
– ಕಣ್ಣೀರು ಹಾಕಿ ಕಳುಹಿಸಿಕೊಟ್ಟ ಮಕ್ಕಳು, ಊರ ಜನ!
– ಯಾದಗಿರಿಯಿಂದ ತೀರ್ಥಹಳ್ಳಿಗೆ ಶಿಕ್ಷಕ ವರ್ಗಾವಣೆ
NAMMUR EXPRESS NEWS
ತೀರ್ಥಹಳ್ಳಿ/ಯಾದಗಿರಿ: ಇದೊಂದು ಅಪರೂಪದ ಘಟನೆ. ಸುಮಾರು 15 ವರ್ಷ 6 ತಿಂಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಸಂದರ್ಭದಲ್ಲಿ ಇಡೀ ಊರಿಗೆ ಊರೇ ಸೇರಿ ವಾಹನದಲ್ಲಿ ಮೆರವಣಿಗೆ ಮಾಡಿ, ಸನ್ಮಾನ ಮಾಡಿ, ಕಣ್ಣೀರು ಹಾಕಿ ಶಿಕ್ಷಕನನ್ನು ಬೀಳ್ಕೊಟ್ಟ ಘಟನೆ ಯಾದಗಿರಿ ಜಿಲ್ಲೆ ಕಂದಹಳ್ಳಿಯಲ್ಲಿ ಇತ್ತೀಚಿಗೆ ನಡೆದಿದೆ. ಕಂದಹಳ್ಳಿ ಶಾಲೆಯಿಂದ ತೀರ್ಥಹಳ್ಳಿ ತಾಲೂಕಿನ ಹೊಸ ಅಗ್ರಹಾರ ಶಾಲೆಗೆ ವರ್ಗಾವಣೆ ಹೊಂದಿದ ಕೃಷ್ಣಮೂರ್ತಿ ನಾಯಕ್ ಅವರ ಪ್ರೀತಿ, ಮಕ್ಕಳ ಮೇಲಿನ ಕಾಳಜಿ ಇಡೀ ಊರಿಗೆ ಪ್ರೀತಿ ಪಾತ್ರವಾಗಿತ್ತು. ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸಿದ ಗುಣ ಇಡೀ ಊರಿಗೆ ಮಾದರಿ ಕೂಡ ಆಗಿತ್ತು. ಹಾಗಾಗಿ 600ಕ್ಕೂ ಹೆಚ್ಚು ಜನ ಅವರ ಸೇವೆಗೆ ಗೌರವ ಸಲ್ಲಿಸಿದ್ದಾರೆ.
ಕೃಷ್ಣಮೂರ್ತಿ ನಾಯಕ್ ಅವರಿಗೆ ಮಕ್ಕಳ ಸನ್ಮಾನ
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕು, ಈಗಿನ ವಡಗೇರಿ ತಾಲೂಕಿನ ಕಂದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 15 ವರ್ಷ ಮುಖ್ಯ ಶಿಕ್ಷಕರಾಗಿ, ಸಾಮಾನ್ಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕೃಷ್ಣಮೂರ್ತಿ ನಾಯಕ್ ಅವರನ್ನು ಗ್ರಾಮಸ್ಥರು ಮೆರವಣಿಗೆ ಮಾಡಿ ಕಳಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ 109 ಮಕ್ಕಳು ಇದೀಗ ವಿದ್ಯಾಭ್ಯಾಸ ಮಾಡುತ್ತಿದ್ದು,2016ರಿಂದ ಓರ್ವ ಶಿಕ್ಷಕರು ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ತಮ್ಮ ನೆಚ್ಚಿನ ಗುರುವಿಗೆ ನೆನಪಿನ ಕಾಣಿಕೆ ನೀಡಿದರು. ಊರಿನ ಎಲ್ಲಾ ಪ್ರಮುಖರು ಒಟ್ಟಾಗಿ ಸನ್ಮಾನಿಸಿದರು.
ಕೊಪ್ಪ ತಾಲೂಕಿನ ಮಾದರಿ ಶಿಕ್ಷಕರು!
ಕೊಪ್ಪ ತಾಲೂಕು ಭಂಡಿಗಡಿ ಮೂಲದ ಕೃಷ್ಣಮೂರ್ತಿ ನಾಯಕ್ ಅವರ ಸೇವೆಯನ್ನು ಯಾದಗಿರಿ ಜಿಲ್ಲೆಯ ಗ್ರಾಮಸ್ಥರು ಅತ್ಯಂತ ವಿನಯಪೂರ್ವಕವಾಗಿ ಸ್ಮರಿಸಿದ್ದು ಊರ ಜನ ಹಾಗೂ ಮಕ್ಕಳು, ಹಳೆಯ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಿಕ್ಷಕರಿಗೆ ನೆನಪಿನ ಕಾಣಿಕೆ ಹಾಗೂ ಗೌರವವನ್ನು ಕೊಟ್ಟು ಕಳಿಸಿದ್ದಾರೆ. ಇಡೀ ಊರಿಗೆ ಊರೇ ಕಣ್ಣೀರು ಹಾಕಿ ಅವರಿಗೆ ಬಿಳ್ಕೊಡುಗೆ ಮಾಡಿರುವುದು ಅವಿಸ್ಮರಣೆಯ ಘಟನೆಯಾಗಿದೆ.
ತೀರ್ಥಹಳ್ಳಿ ಹೊಸ ಅಗ್ರಹಾರ ಶಾಲೆಗೆ ವರ್ಗಾವಣೆ
ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ಪ್ರೌಢ, ಹರಿಹರ ಪುರದಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಕೃಷ್ಣಮೂರ್ತಿ ನಾಯಕ್ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಪ್ರಪುಲ್ಲಾ ಆಗುಂಬೆ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅ.6ರಂದು ಯಾದಗಿರಿ ಜಿಲ್ಲೆಯ ಕಂದ ಹಳ್ಳಿಯಿಂದ ವೃತ್ತಿ ವರ್ಗಾವಣೆಯಾಗಿದ್ದು, ಇತ್ತೀಚಿಗೆ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನನ್ನ ಸೇವೆಗೆ ಅಭಿಮಾನವೇ ಫಲ
ಇದು ನನಗೆ ಮರೆಯಲಾಗದ ದಿನ. ನನ್ನ ಸೇವೆಗೆ ಸಂದ ಫಲ ಎಂದು ಅವರು ಹೇಳಿದ್ದಾರೆ. ಪ್ರಯುಕ್ತ ನನ್ನ ಅಳಿಲು ಸೇವೆಗೆ ಬಹು ದೊಡ್ಡ ಅವಿಸ್ಮರಣೀಯ ಅಭೂತಪೂರ್ವ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಯಾದಗಿರಿ ಜಿಲ್ಲೆಯ ವಡಗೆರೆ ತಾಲೂಕಿನ ಕಂದಹಳ್ಳಿ ಗ್ರಾಮದ ಪ್ರೀತಿಯ ಪೋಷಕರು ,ಗುರು ಹಿರಿಯರು, ಹಳೆಯ ವಿದ್ಯಾರ್ಥಿಗಳು , ಎಸ್.ಡಿ. ಎಂ. ಸಿ ಪದಾಧಿಕಾರಿಗಳು , ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಅಡುಗೆ ಹಾಗೂ ಅಂಗನವಾಡಿ ಸಿಬ್ಬಂದಿಯವರು , ಶಿಕ್ಷಕ ಮಿತ್ರರ ಅಭಿಮಾನಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.