ತೀರ್ಥಹಳ್ಳಿಯ ಮೃಗವಧೆಯಲ್ಲಿ ರಾಮನೇ ಸ್ಥಾಪಿಸಿದ ದೇಗುಲ!
– ಮಲ್ಲಿಕಾರ್ಜುನ ದೇವರ ಸನ್ನಿಧಿ: ಮಾರೀಚನನ್ನು ರಾಮ ಸಂಹರಿಸಿದ ಸ್ಥಳ!
– ರಾಮ ಬಂದು ಹೋಗಿದಕ್ಕೆ ಈ ದೇವಾಲಯವೇ ಸಾಕ್ಷಿ
– ರಾಮ ಕೊಂಡ, ಅಂಬುತೀರ್ಥ, ಮೃಗವಧೆಯಲ್ಲಿ ವಿಶೇಷ
NAMMUR EXPRESS NEWS
ತೀರ್ಥಹಳ್ಳಿ: ಅಯೋಧ್ಯೆ ಮರು ಜೀವ ಪಡೆಯುತ್ತಿದ್ದಂತೆ ಎಲ್ಲೆಡೆ ರಾಮ ಜಪ ಶುರುವಾಗಿದೆ. ಇಡೀ ಭರತ ಖಂಡವೇ ಮರ್ಯಾದಾ ಪುರುಶೋತ್ತಮನ ಭಕ್ತಿಯಲ್ಲಿ ತೇಲಾಡುತ್ತಿದೆ. ರಾಮಾಯಣದ ವನವಾನವಾಸದಲ್ಲಿ ರಾಮ ಚಲಿಸಿದ ಜಾಗವೆಲ್ಲಾ ಭಕ್ತರ ಶ್ರದ್ಧಾ ಕೇಂದ್ರವಾಗಿವೆ. ಇಂತಹ ಜಾಗ ಕರ್ನಾಟಕದಲ್ಲೂ ಇದೆ. ನೀವು ಅಂದುಕೊಂಡಿರಬಹುದು ಅದು ಹನುಮಂತನ ಜನ್ಮ ಭೂಮಿ ಅಂಜನಾದ್ರಿ ಅಂತ . ಆದ್ರೆ ಅದನ್ನು ಹೊರತು ಪಡಿಸಿ ಇನ್ನೊಂದು ಕಡೆಗೆ ರಾಮ ಬಂದಿದ್ದ. ಇದೇ ಜಾಗ ರಾಮಾಯಣ ಅನ್ನೋ ಮಹಾ ಕಾವ್ಯಕ್ಕೆ ತಿರುವು ಸಿಕ್ಕಿದ ಜಾಗ. ತೀರ್ಥಹಳ್ಳಿ ತಾಲೂಕು ಮೃಗವಧೆ!. ಹೌದು. ಇಲ್ಲಿ ನಡೆದ ಆ ಘಟನೆ ಸೀತೆಯನ್ನು ರಾವಣನ ಕೈಗೆ ಸಿಗುವಂತೆ ಮಾಡಿದ್ದು.
ಇಲ್ಲಿ ರಾಮ ಬಿಟ್ಟ ಒಂದು ಬಾಣ ರಾಕ್ಷಸನ್ನು ನೆಲಗೆಡಹುವಂತೆ ಮಾಡಿತ್ತು. ಇದು ಮಾರೀಚನನ್ನು ರಾಮ ಸಂಹರಿಸಿದ ಸ್ಥಳ. ರಾವಣನ ಮಾವನಾದ ಮಾರೀಚನು ಸೀತೆಯನ್ನು ಮೋಸಗೊಳಿಸಲು ಚಿನ್ನದ ಜಿಂಕೆಯ ರೂಪದಲ್ಲಿ ಪಂಚವಟಿಯಲ್ಲಿ ಕಾಣಿಕೊಂಡನು. ಸೀತೆಯ ಬಯಕೆಯ ಮೇರೆಗೆ ರಾಮನು ಆತನನ್ನು ಅಟ್ಟಿಸಿಕೊಂಡು ಬಂದು ಬಾಣ ಬಿಟ್ಟನು . ಆ ಬಾಣವು ಇದೇ ಜಾಗದಲ್ಲಿ ಮಾರೀಚನಿಗೆ ತಾಕಿತು ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತೆ. ಇನ್ನು ಮಾರೀಚ ರಾವಣನಂತೆ ಬ್ರಾಹ್ಮಣನಾಗಿದ್ದ, ಯಾವಾಗ ರಾಮನ ಬಾಣತಾಗಿತೋ ಆತನ ತೊಡೆಯಿಂದ ಶಿವಲಿಂಗ ಹೊರ ಬಂತು. ಅದನ್ನು ರಾಮ ಇಲ್ಲೇ ಸ್ಥಾಪಿಸಿದ ಅನ್ನೋ ಮಾತಿದೆ. ಇಂದಿಗೂ ಅದೇ ಶಿವಲಿಂಗವನ್ನು ಆರಾಧಿಸಿಕೊಂಡು ಬರಲಾಗುತ್ತಿದೆಯಂತೆ ಇನ್ನು ಮಾರೀಚ ಸತ್ತು ಬಿದ್ದ ಜಾಗದಲ್ಲಿ ಅಶೋಕ ವೃಕ್ಷವೊಂದು ಸ್ಥಾಪಿಸಲಾಗಿತ್ತಂತೆ.
ಆದರೆ ಅದು ಈಗ ನಶಿಸಿ ಹೋಗಿದೆ ಅನ್ನೋದು ಇಲ್ಲಿಯ ಸ್ಥಳೀಯರ ಮಾತು. ಅಂದ ಹಾಗೆ ಈ ಜಾಗವಿರೋದು ಎಲ್ಲಿ ಅಂದ್ರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೋಕಿನ ಒಂದು ಗ್ರಾಮದಲ್ಲಿ. ಈ ಗ್ರಾಮವನ್ನು ಮೃಗವಧೆ ಅನ್ನೋ ಹೆಸರಿನಿಂದಲೇ ಕರೆಯಲಾಗುತ್ತೆ. ಮೃಗವಧೆ ಅಂದ್ರೆ ಮಾರೀಚನ ವಧೆ ಅನ್ನೋದು ಇಲ್ಲಿನ ಜನರ ನಂಬಿಕೆ. ಇಲ್ಲಿ ರಾಮನೇ ಸ್ಥಾಪಿಸಿದ ಮಲ್ಲಿಕಾರ್ಜುನ ದೇವರ ಸನ್ನಿಧಿ ಇದೆ. ಮುಂದೆ ಬಂದ ಅರಸರು ಇಲ್ಲಿನ ಮಹತ್ವ ಅರಿತು ಈ ದೇವಾಲಯದ ಜೀರ್ಣೋಧಾರ ಮಾಡಿದ್ರು ಅನ್ನೋ ಮಾತನ್ನು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಇನ್ನು ಇಲ್ಲಿಗೆ ಭಾನುವಾರದಂದು ಹೆಚ್ಚಿನ ಭಕ್ತರು ಬರುತ್ತಾರೆ ಉಳಿದಂತೆ ಈ ಸ್ಥಳ ಹೆಚ್ಚಿನ ಪ್ರವಾಸಿಗರನ್ನು ಹೊಂದಿಲ್ಲ. ಪ್ರಕೃತಿಯ ಮಡಿಲಲ್ಲಿ ಶಾಂತವಾಗಿ ರಾಮನ ಕಥೆಯನ್ನು ಹೇಳುವ ಸ್ಥಳ ನಿಜಕ್ಕೂ ಅದ್ಭುತ ಎಂಬುದರಲ್ಲಿ ಎರಡು ಮಾತಿಲ್ಲ.

ಮೃಗವಧೆಯಲ್ಲಿ ವಿಶೇಷ ಪೂಜೆ!
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಹಿನ್ನೆಲೆ ಶ್ರೀ ಕ್ಷೇತ್ರ ಮೃಗವಧೆ ಯಲ್ಲಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಹಾಗೂ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು ಸಾಮೂಹಿಕ ಜಪ,ಹೋಮ ಹವನ, ಅನ್ನಸಂತರ್ಪಣೆ ನಡೆಯುತ್ತಿದೆ. ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು ಸಾಮೂಹಿಕ ಪೂಜೆ ರಾಮ ಜಪ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ.
ತೀರ್ಥಹಳ್ಳಿಯ ರಾಮಕೊಂಡ, ಅಂಬುತೀರ್ಥ ವಿಶೇಷ!
ಶ್ರೀರಾಮ ಸೀತಾ ಮಾತೆಗೆ ಬಾಯಾರಿಕೆಯಾದಾಗ ತನ್ನ ಬಾಣವನ್ನು ನೆಲಕ್ಕೆ ಬಿಟ್ಟು ಅಲ್ಲಿ ಚಿಮ್ಮಿದ ಉದಕವೇ ಶರಾವತಿಯಾಗಿ ಹರಿದು ಕರ್ನಾಟಕದ ಜೋಗ್ ಫಾಲ್ಸ್ ಆಗಿದೆ. ಹಾಗೆ ಬಾಣದಿಂದ ನೀರು ತೆಗೆದ ಸ್ಥಳವೇ ‘ಅಂಬುತೀರ್ಥ’. ಯಾವುದೇ ನೀರಿನ ಮೂಲಗಳೂ ಇಲ್ಲದೇ ಅಲ್ಲಿ ಸದಾಕಾಲ ನೀರು ಉತ್ಪತ್ತಿಯಾಗಿ ಹರಿಯುವುದೇ ವಿಶೇಷ. ಇಲ್ಲಿ ಕೂಡ ವಿಶೇಷ ಪೂಜೆ ನಡೆದಿದೆ.
ರಾಮ ಸ್ನಾನ ಮಾಡಿದ ತುಂಗಾ ನದಿಯ ರಾಮ ಕೊಂಡ!
ತೀರ್ಥಹಳ್ಳಿಯಲ್ಲಿ ರಾಮ ಪಾಪ ವಿಮೋಚನಿಗಾಗಿ ಸ್ನಾನ ಮಾಡಿದ್ದ ಎನ್ನಲಾದ ರಾಮ ಕೊಂಡ ತೀರ್ಥಹಳ್ಳಿ ತುಂಗಾ ನದಿಯಲ್ಲಿದೆ. ಈಗಾಗಲೇ ಎಳ್ಳಮಾವಾಸ್ಯೆ ಜಾತ್ರೆ ನಡೆದಿದೆ. ಇಲ್ಲಿ ಸಾವಿರಾರು ಮಂದಿ ತೀರ್ಥ ಸ್ನಾನ ಮಾಡುತ್ತಾರೆ. ಇಲ್ಲಿಯೂ ರಾಮನ ಕುರುಹುಗಳಿವೆ.