ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣೇಶ ಇಂದು ವಿಸರ್ಜನೆ
– ಪಟ್ಟಣದಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆ
– ಛತ್ರಕೇರಿಯಲ್ಲಿ ಸಂಜೆ 7 ಗಂಟೆಯಿಂದ ಪ್ರಾಣೇಶ್ ಹಾಸ್ಯ ಸಂಜೆ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಗಣೇಶೋತ್ಸವಗಳಲ್ಲಿ ಒಂದಾಗಿರುವ ಮುಖ್ಯ ಬಸ್ ನಿಲ್ದಾಣದ ಗಣೇಶನ ವಿಸರ್ಜನೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 12:30 ಕ್ಕೆ ಮಹಾ ಪೂಜೆ ನಂತರ ವಿಸರ್ಜನಾ ಮೆರವಣಿಗೆ ಹೊರಡಲಿದೆ. ಗಣೇಶೋತ್ಸವ ಸಮಿತಿಯವರು ಈಗಾಗಲೇ ಕುಳ್ಳಪ್ಪು ಖ್ಯಾತಿಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇರಿ ಹಲವು ವಿಶೇಷ ಕಾರ್ಯಕ್ರಮ ನಡೆಸಿದ್ದು ಇಂದು ಅದ್ದೂರಿಯಾಗಿ ಗಣೇಶನ ವಿಸರ್ಜನೆ ಮಾಡುವ ಮೂಲಕ ತೆರೆ ಬೀಳಲಿದೆ.
ಇಂದಿನ ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷ, ನಾಸಿಕ್ ಬ್ಯಾಂಡ್, ಕೀಲುಕುದುರೆ, ಡಿಜೆ ಸೇರಿದಂತೆ ಹಲವು ವೈವಿಧ್ಯಗಳ ಜೊತೆಗೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.
ವಿಸರ್ಜನೆ ರಸ್ತೆ ಮಾರ್ಗ ಹೇಗೆ?
ಮುಖ್ಯ ಬಸ್ ನಿಲ್ದಾಣದಿಂದ ಹೊರಡುವ ಗಣೇಶೋತ್ಸವದ ಮೆರವಣಿಗೆ ಕುಶಾವತಿ, ಕೆ. ಸಿ ರಸ್ತೆ, ಮೀಲ್ಕೆರಿ ರಸ್ತೆ, ಛತ್ರಕೇರಿ ರಸ್ತೆ, ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ, ದೊಡ್ಡಮನೆಕೇರಿ, ಸೀಬಿನಕೆರೆ, ಆಗುಂಬೆ ಬಸ್ ನಿಲ್ದಾಣ, ಮಸೀದಿ ರಸ್ತೆ, ಸೊಪ್ಪುಗುಡ್ಡೆ, ಮಾರಿಕಾಂಬಾ ದೇವಸ್ಥಾನದ ರಸ್ತೆ, ರಥಬೀದಿ ಮೂಲಕ ತುಂಗಾ ನದಿಯಲ್ಲಿ ಅದ್ದೂರಿ ವಿಸರ್ಜನೆ ನಡೆಯಲಿದೆ. ಮೆರವಣಿಗೆಯು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋರಡಲಿದೆ.
ಛತ್ರಕೇರಿಯಲ್ಲಿ ಸಂಜೆ 7 ಗಂಟೆಯಿಂದ ಹಾಸ್ಯ ಸಂಜೆ
ತೀರ್ಥಹಳ್ಳಿಯ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಶನಿವಾರ ಸಂಜೆ 7 ಗಂಟೆಗೆ ತೀರ್ಥಹಳ್ಳಿಯ ವಿದ್ಯಾದಿರಾಜ ಸಭಾ ಭವನದಲ್ಲಿ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್ ಹಾಗೂ ಅವರ ವೃಂದದವರಾದ ನರಸಿಂಹ ಜೋಶಿ, ಬಸವರಾಜ ಮಹಾಮುನಿ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದ್ದು ಸರ್ವರು ಆಗಮಿಸುವಂತೆ ಸಮಿತಿ ಕೋರಿದೆ.