ಅದ್ದೂರಿ ದಸರಾಗೆ ಸಿದ್ಧಗೊಳ್ಳುತ್ತಿದೆ ತೀರ್ಥಹಳ್ಳಿ..!
– ಸಾಂಪ್ರದಾಯಿಕ ದಸರಾ ಮೆರವಣಿಗೆ, ಕಾರ್ಯಕ್ರಮಕ್ಕೆ ಚಾಲನೆ
– ವಿಶೇಷ ಆಕರ್ಷಣೀಯ ಕಾರ್ಯಕ್ರಮಗಳ ಆಯೋಜನೆ
– ಈ ಸಲ ಏನಿದೆ ವಿಶೇಷ..?.. ಇಲ್ಲಿದೆ ದಸರಾ ಸೊಬಗು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಈ ಬಾರಿ ಅದ್ದೂರಿ ದಸರಾ ಉತ್ಸವಕ್ಕೆ ಸಿದ್ಧಗೊಳ್ಳುತ್ತಿದ್ದು, ಎಲ್ಲಾ ಅಂತಿಮ ಹಂತಕ್ಕೆ ಬಂದಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿ ವಿದ್ಯುತ್ ದೀಪದ ಅಲಂಕಾರ, ಕುಶಾವತಿ ಪಾರ್ಕ್ ಅಲಂಕಾರ ನಡೆಯುತ್ತಿದೆ. ದಸರಾ ಆಚರಣೆ ಕುರಿತು ಮಂಗಳವಾರ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದು ಪತ್ರಿಕಾಗೋಷ್ಠಿಯಲ್ಲಿ ದಸರಾ ಸಮಿತಿಯ ಅಧ್ಯಕ್ಷರಾದ ಸಂದೇಶ ಜವಳಿ ಮಾತನಾಡಿ, ಐತಿಹಾಸಿಕ ತೀರ್ಥಹಳ್ಳಿಯ ನಾಡಹಬ್ಬ ದಸರಾ ಹಬ್ಬ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿವಿಧ ಕಾರ್ಯಕ್ರಮಗಳೊಂದಿಗೆ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲು ವಿವಿಧ ಯೋಜನೆಗಳನ್ನು ಹಾಗೂ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಬಾರಿಯ ವಿಶೇಷ ಏನೆಂದರೆ ತೀರ್ಥಹಳ್ಳಿಯ ದಸರಾದಲ್ಲಿ ವಿಶೇಷ ಆಕರ್ಷಣೆಯಾಗಿರುವಂತಹ ಜಾನಪದ ಕಲೆ ಹುಲಿವೇಷ ಸ್ಪರ್ಧೆ ಸೊಪ್ಪುಗುಡ್ಡೆಯಲ್ಲಿ ನಡೆಯುತ್ತಿತ್ತು. ಈ ಬಾರಿ ಅದನ್ನು ಒಂದೇ ಕಡೆಗೆ ಕುಶಾವತಿ ಪಾರ್ಕ್ ಅಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅ. 21 ನೇ ತಾರೀಕಿನಿಂದ ಪ್ರಾರಂಭವಾಗಿ ಈ ಸಾಂಸ್ಕೃತಿಕ ದಸರಾ 24ನೇ ತಾರೀಕಿನವರೆಗೆ ನಡೆಯಲಿದೆ. 21ನೇ ತಾರೀಖಿನಂದು ಮೊಟ್ಟಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ಕವಿಕೋಷ್ಠಿಯನ್ನು ಈ ಬಾರಿ ಆಯೋಜನೆ ಮಾಡಲಾಗಿದೆ. ಕವಿಗೋಷ್ಠಿಯನ್ನು ಈ ಎರಡು ವರ್ಷಗಳಿಂದ ತಾಲೂಕಿನ ಮಟ್ಟದಲ್ಲಿ ಮಾಡಿದ್ದೆವು, ಆದರೆ ಈ ಬಾರಿ ಇದನ್ನು ಜಿಲ್ಲಾ ಮಟ್ಟಕ್ಕೆವಿಸ್ತರಿಸಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಮಾಡಿ ಸಾಹಿತ್ಯ ಪ್ರೇಮಿಗಳಿಗೆ ಹಾಗೂ ಬರಹಗಾರರಿಗೆ ಒಂದು ಸೂಕ್ತ ವೇದಿಕೆಯನ್ನು ಈ ಬಾರಿಯ ದಸರಾ ಸಾಂಸ್ಕೃತಿಕ ಸಮಿತಿಯಲ್ಲಿ ಅವರಿಗೆ ಅವಕಾಶವನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮ 21ನೇ ತಾರೀಕು ಶನಿವಾರ ಬೆಳಗ್ಗೆ 10 ಗಂಟೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ.

ಹಾಗೂ 22ನೇ ತಾರೀಕು ಭಾನುವಾರದಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವಂತಹ ಜಿ ಎಸ್ ನಾರಾಯಣ್ ರಾವ್ ರವರು ಉದ್ಘಾಟಿಸಲಿದ್ದಾರೆ. ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಹಾಗೂ ಸ್ಥಳೀಯ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳು ಕುಶಾವತಿಯ ನೆಹರು ಪಾರ್ಕ್ ನ ವೇದಿಕೆಯ ಮೇಲೆ ನಡೆಯಲಿದೆ.

ಡ್ಯಾನ್ಸ್ ಪ್ಯಾಲೇಸ್ ಗ್ರೂಪ್ ತಂಡದಿಂದ ಹಳೆ ಕನ್ನಡ ಚಲನಚಿತ್ರ ಗೀತೆಗಳನ್ನು ಆರಿಸಿ ನೃತ್ಯ ಮಾಡಲಿದ್ದಾರೆ. 23 ರಂದು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ, ಹಾಗೂ ದಸರಾ ಸಮಿತಿಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿರುವಂತಹ ಹಿರಿಯರಿಗೆ ಈ ವೇದಿಕೆ ಮೇಲೆ ಅಭಿನಂದಿಸಿ ಗೌರವಿಸುವಂತಹ ಕಾರ್ಯಕ್ರಮ ನಡೆಯಲಿದೆ. 24 ರ ವಿಜಯದಶಮಿಯಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಕರ್ಷಣೀಯ ಮೆರವಣಿಯಲ್ಲಿ ದಸರಾ ಉತ್ಸವ ನಡೆಯಲಿದೆ ಎಂದು ಹೇಳಿದರು.
ಹುಲಿವೇಷ ಸ್ಪರ್ಧಾ ರಂಗು!
ದಸರಾ ಸಮಿತಿ ಉಪಾಧ್ಯಕ್ಷರಾದ ಆರ್ ಮದನ್ ರವರು ಮಾತನಾಡಿ ತೀರ್ಥಹಳ್ಳಿ ದಸರಾ ಇದೊಂದು ವಿಶೇಷ ಕಲೆ. ಈ ವರ್ಷ ನಮ್ಮ ದಸರಾ ಸಮಿತಿಯ ಜನರ ಸಲಹೆಯಂತೆ ಒಂದೇ ವೇದಿಕೆ ಮೇಲೆ ಎಲ್ಲಾ ಕಾರ್ಯಕ್ರಮವನ್ನು ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಹುಲಿ ವೇಷ ಸ್ಪರ್ಧೆಯನ್ನು ಅವರಿಗೆ ಪ್ರೋತ್ಸಾಹ ಕೊಡುವ ಸಲುವಾಗಿ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ. ಪ್ರಥಮ ಬಹುಮಾನ 20 ಸಾವಿರ, ದ್ವಿತೀಯ 12500, ತ್ರಿತಿಯ ಬಹುಮಾನ 7500, ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ 5000 ಪ್ರೋತ್ಸಾಹ ಧನ ಎಂದು ಕೊಡಲಾಗುವುದು ಎಂದರು. ಮೊದಲು ನೊಂದಾಯಿಸಿದ 10 ಅಭ್ಯರ್ಥಿಗಳಿಗೆ ಬಣ್ಣವು ಕೂಡ ಕೊಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಸರಾ ಸಮಿತಿ ಅಧ್ಯಕ್ಷರಾದ ಸಂದೇಶ ಜವಳಿ, ಉಪಾಧ್ಯಕ್ಷರಾದ ಆರ್ ಮದನ್, ಪ ಪಂ ಅಧ್ಯಕ್ಷರಾದ ಗೀತಾ ರಮೇಶ್, ದಸರಾ ಉಪ ಸಮಿತಿ ಸಂಚಾಲಕರು, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾನ್ ರಾಮಣ್ಣ, ಪಟ್ಟಣ ಪಂಚಾಯತ್ ಸದಸ್ಯರಾದ ಮಂಜುಳಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಜ್ಯೋತಿ ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕುಕ್ಕೆ ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
