ಇಂದು ತೀರ್ಥಹಳ್ಳಿಯಲ್ಲಿ ಕೊನೆಯ ದಿನದ ಮಾರಿ ಜಾತ್ರೆ..!
– ರಾತ್ರಿ ಭೋಜನ ಪ್ರಸಾದಕ್ಕೆ 10 ಸಾವಿರ ಜನ ಸೇರುವ ನಿರೀಕ್ಷೆ
– ಮಧ್ಯಾಹ್ನ 3 ಗಂಟೆಯಿಂದ ವಿವಿಧ ವೇಷ ಭೂಷಣಗಳೊಂದಿಗೆ ಮಾರಿಗೊಂಬೆಯ ಮೆರವಣಿಗೆ
NAMMUR EXPRESS NEWS
ತೀರ್ಥಹಳ್ಳಿ: ಮಾರ್ಚ್12ರಂದು ಆರಂಭಗೊಂಡು ವೈಭವದಿಂದ ನಡೆಯುತ್ತಿರುವ ಮಾರಿ ಜಾತ್ರೆಗೆ ಇಂದು 9ನೇ ದಿನದ ಕೊನೆಯ ದಿನದ ಮಾರಿ ಜಾತ್ರೆಯಾಗಿದೆ. ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮಾರ್ಚ್ 20ರ ಇಂದು ತೆರೆ ಬೀಳಲಿದೆ. ಇಂದು ಬೆಳಗ್ಗಿನಿಂದಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಮಧ್ಯಾಹ್ನ 1 ಗಂಟೆಗೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ವಿವಿಧ ದಾನಿಗಳ ಸಹಯೋಗದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಜಾತ್ರೆಯ ಎಂಟನೇ ದಿನವಾದ ನಿನ್ನೆ ರಾತ್ರಿ ಎಣ್ಣೆ ಭಂಡಾರವನ್ನು ದೇವಸ್ಥಾನದಿಂದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಧನಂಜಯ್ ಮನೆಗೆ ಕೊಂಡೊಯ್ದು ನಂತರ ಸ್ಥಳೀಯರಿಂದ ಮಡಿಲು ತುಂಬುವ ಕಾರ್ಯಕ್ರಮ ನಡೆದಿದೆ.
ನಂತರ ಎಣ್ಣೆ ಭಂಡಾರವನ್ನು ದೇವಸ್ಥಾನಕ್ಕೆ ತರಲಾಯಿತು. ನಂತರ ಗೊಂಬೆಗಳಿಗೆ ಸಭಾ ಭವನದಲ್ಲಿ ಅದ್ಧೂರಿಯಾಗಿ ಸಾವಿರಾರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ, ಅಲ್ಲಿಂದ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತಂದು ಬೆಳಗಿನ ಜಾವದ ಸಮಯದಲ್ಲಿ ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿ, ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಸಾರ್ವಜನಿಕರು ಇಂದು ಬೆಳಗಿನ ಜಾವದಿಂದಲೇ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಸಂಜೆಯವರೆಗೆ ಈ ಮಾತಂಗಿ ಪೂಜೆ ನಡೆಯುತ್ತದೆ. ಬೆಳಗ್ಗಿನಿಂದ ಮಾರಿಗೊಂಬೆ ಪೂಜೆ, ಭಕ್ತಾದಿಗಳಿಂದ ಹಣ್ಣುಕಾಯಿ ನೈವೇದ್ಯ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ವಿವಿಧ ವೇಷ ಭೂಷಣಗಳೊಂದಿಗೆ ಮಾರಿಗೊಂಬೆಯ ಅದ್ದೂರಿ ಮೆರವಣಿಗೆ ನಡೆಸಿ ಕುಶಾವತಿ ತುಂಗಾನದಿಯಲ್ಲಿ ವಿಸರ್ಜನೆ ಮಾಡಲಾಗುವುದು.
ರಾತ್ರಿ 7 ಗಂಟೆಯಿಂದ ನಾಡ್ತಿಯಲ್ಲಿರುವ ಮಾರಿಕಾಂಬಾ ಸಭಾಭವನದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ತಾಲ್ಲೂಕಿನ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದೇವಸ್ಥಾನ ಆಡಳಿತ ಸೂಕ್ತ ವ್ಯವಸ್ಥೆಗಳನ್ನು ಪೂರೈಸಿದೆ.
