ತೀರ್ಥಹಳ್ಳಿಯಲ್ಲಿ ಮತದಾನ ಜನ ಜಾಗೃತಿ!
– ತೀರ್ಥಹಳ್ಳಿ ಬಸ್ ನಿಲ್ದಾಣದಿಂದ ಬೈಕ್ ಜಾಥಾ, ಮೆರವಣಿಗೆ
– ರಂಗೋಲಿಯಲ್ಲಿ ಭಾರತದ ನಕ್ಷೆ ಬಿಡಿಸಿ ಮತದಾನ ಜಾಗೃತಿ!
– ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕಲೇ ಬೇಕು…
NAMMUR EXPRESS NEWS
ತೀರ್ಥಹಳ್ಳಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಲು ಸಾರ್ವಜನಿಕರಲ್ಲಿ ಕಾರ್ಯಕ್ರಮಗಳ ಮೂಲಕ ತೀರ್ಥಹಳ್ಳಿಯಲ್ಲಿ ಜಾಗೃತಿ ಮೂಡಿಸಲಾಗಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ, ತಾಲೂಕು ಆಡಳಿತ ವತಿಯಿಂದ ಮತದಾನ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ ಅವರು ಮಾತನಾಡಿ, ಚುನಾವಣೆಯ ಪರವಾಗಿ ದೇಶದ ಗರ್ವ ಈ ಒಂದು ಘೋಷವಾಕ್ಯದೊಂದಿಗೆ ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ಇನ್ನೇನು ಸಮೀಪದಲ್ಲಿ ಇದ್ದು, ಇಡೀ ದೇಶದಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂದಿದ್ದೇವೆ ಎಂದರು.
ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಭಾಗವಹಿಸುವಿಕೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಲೂಕು ಮತದಾನದ ಪ್ರಮಾಣದಲ್ಲಿ ಇಡೀ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು. ಜಿಲ್ಲೆಯಲ್ಲಿ ನಾವು ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ. ಇಂದು ವಿಭಿನ್ನವಾಗಿ ತಾಲೂಕಿನಲ್ಲಿ ಯಕ್ಷಗಾನ ಕಲಾವಿದರಿಂದ ಘೋಷವಾಕ್ಯಗಳನ್ನು ಹೇಳಿಸುವ ಮೂಲಕ ಇವತ್ತಿನ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಪ್ರತಿಯೊಬ್ಬರೂ ಕೂಡ ಮೇ ಏಳರಂದು ಮತದಾನದಿಂದ ಹಿಂದೆ ಸರಿಯದೆ, ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದರು. ನಂತರ ಬೈಕ್ ಜಾತಕೆ ಚಾಲನೆ ನೀಡಿದರು. ತೀರ್ಥಹಳ್ಳಿ ಬಸ್ ಸ್ಟಾಂಡ್ ನಿಂದ ಬೈಕ್ ಜಾಥಾ ಮತ್ತು ಮೆರವಣಿಗೆ ಆಗುಂಬೆ ಸರ್ಕಲ್ ಬಂದು ಆಗುಂಬೆ ಸರ್ಕಲ್ ನಿಂದ ಮೆರವಣಿಗೆ ಮುಖಾಂತರ ತಾಲೂಕು ಪಂಚಾಯಿತಿ ತಲುಪಿ, ತಾಲೂಕು ಪಂಚಾಯಿತಿ ಆವರಣದಲ್ಲಿ ಭಾರತದ ನಕ್ಷೆ ರಂಗೋಲಿಯಲ್ಲಿ ಬಿಡಿಸಿ ಮೇಣದಬತ್ತಿ ದೀಪವನ್ನು ಹಚ್ಚಿ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಿ, ಮತದಾನ ಮಾಡುವಂತೆ ಪ್ರತಿಜ್ಞೆ ಮಾಡಿ ಕಾರ್ಯಕ್ರಮಕ್ಕೆ ವಿರಾಮ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಶೈಲಾ, ಮ್ಯಾನೇಜರ್ ರಾಘವೇಂದ್ರ ಮತ್ತು ಸಿಬ್ಬಂದಿ ವರ್ಗ ಮತ್ತು ಪೋಲಿಸ್ ಇಲಾಖೆ, ಮೆಸ್ಕಾಂ ಇಲಾಖೆ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗ, ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಎಲ್ಲ ಇಲಾಖೆ ಸಿಬ್ಬಂದಿಗಳು ಇದ್ದರು.
