ಜಲಜೀವನ್ ಯೋಜನೆಗೆ ಯಾವಾಗ ಮುಕ್ತಿ?!
– ಇನ್ನು ಕೆಲವು ಕಡೆ ಕಾಮಗಾರಿ ಆರಂಭವಾಗಿಲ್ಲ
– ಹೊಂಡ ಅಗೆದು ಗುತ್ತಿಗೆದಾರರು ನಾಪತ್ತೆ
– ನೀರು ಬರುತ್ತಿಲ್ಲ, ಜನರ ದೂರು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಬಹುತೇಕ ಕಡೆ ಜಲಜೀವನ್ ಯೋಜನೆ ಅಡಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ನಡೆಯುತ್ತಿದೆ. ಆದರೆ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಈ ಯೋಜನೆ ಶುರುವೇ ಆಗಿಲ್ಲ. ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದೀಗ ಕೆಲವು ಗುತ್ತಿಗೆದಾರರು ಹಾಗೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಳ್ಳ ಹಿಡಿದಿದೆ. ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಯೋಜನೆ ಅನೇಕ ಕಡೆ ಹೋಂಡಾ ಅಗೆಯುವುದರಲ್ಲಿ ಸೀಮಿತವಾಗಿದೆ. ಇನ್ನು ಇದ್ದ ಕಾಮಗಾರಿಯನ್ನೇ ಅರ್ಧಂಬರ್ಧ ಮಾಡಿರುವ ಅನೇಕ ಗುತ್ತಿಗೆದಾರರು ಬೋರ್ಡ್ ಅನ್ನು ಅಳವಡಿಸಿ ನಾಪತ್ತೆಯಾಗಿದ್ದಾರೆ.
ಜೆ.ಜೆ.ಎಂ ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಕೊಡುವ ಕೇಂದ್ರ ಸರ್ಕಾರದ ಯೋಜನೆಗೆ ಇದೀಗ ಸಂಕಟ ಎದುರಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಶಾಸಕರು ಹಾಗೂ ಇಂಜಿನಿಯರ್ಗಳು ಸೂಕ್ತ ಗಮನಿಸದೇ ಇರುವುದು ಇದಕ್ಕೆ ಮತ್ತಷ್ಟು ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ದೂರಿದ್ದಾರೆ.
38 ಗ್ರಾಮ ಪಂಚಾಯತ್ ಅಲ್ಲಿ ಅವ್ಯವಸ್ಥೆ!
ತೀರ್ಥಹಳ್ಳಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಅವ್ಯವಸ್ಥೆ ಉಂಟಾಗಿದ್ದು, ಇನ್ನು ಈ ಗ್ರಾಮ ಪಂಚಾಯಿತಿಯಲ್ಲೂ ಕೂಡ ಕಳೆದ ಒಂದು ವರ್ಷಗಳಿಂದ ಈ ಸಮಸ್ಯೆ ಉಂಟಾಗಿದೆ. ಆದರೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಆದರೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರು ಈ ಬಗ್ಗೆ ಗಮನಿಸಿಲ್ಲ ಎಂದು ದೂರು ಕೇಳಿ ಬಂದಿವೆ. ತಕ್ಷಣ ತೀರ್ಥಹಳ್ಳಿ ತಾಲೂಕಿನ ಅನೇಕ ಕಡೆಗಳಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ಇನ್ನು ಬಿಸಿಲು ಹೆಚ್ಚುತ್ತಿದ್ದಂತೆ ಅನೇಕ ಕಡೆ ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಇನ್ನು ಮುಂದಿನ ವರ್ಷಗಳಲ್ಲಿ ನೀರಿನ ಕೊರತೆ, ಭೀಕರತೆ ಉಂಟಾಗಲಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೋಟ್ಯಾಂತರ ರೂ ಹಣ ದುಂದು ವೆಚ್ಚ ಆಗುವುದಲ್ಲದೆ ಪೋಲಾಗುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತ, ತಾಲೂಕು ಆಡಳಿತ ಸಂಬಂಧಪಟ್ಟಂತೆ ಪತ್ರಿ ಗ್ರಾಮ ಪಂಚಾಯಿತಿಗಳಲ್ಲಿ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಗೆ ಎಚ್ಚರಿಕೆಯಿಂದ ನೀಡಬೇಕು. ಇಲ್ಲವಾದಲ್ಲಿ ಹಣವು ಇಲ್ಲ, ಇತ್ತ ಯೋಜನೆಯು ಇಲ್ಲದಂತಹ ಪರಿಸ್ಥಿತಿ ಉಂಟಾಗುತ್ತದೆ.
