ತೀರ್ಥಹಳ್ಳಿಯಲ್ಲಿ ಕಾರ್ಮಿಕರ ಹಿತ ಸಹಕಾರ ಸಂಘ ಸ್ಥಾಪನೆ
– ಸರ್ವ ಸದಸ್ಯರ ಸಭೆಯಲ್ಲಿ ಮಂಜುನಾಥ್ ಡಿ ಗೌಡ ಮನದ ಮಾತು
– ಮೊದಲನೇ ವರ್ಷದ ಕಾರ್ಮಿಕರ ಹಿತ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಯಶಸ್ವಿ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪ್ರತೀ ಕಾರ್ಮಿಕರಿಗೆ ತಲುಪುವ ಉದ್ದೇಶದಿಂದ ಕಾರ್ಮಿಕರ ಹಿತ ಸಹಕಾರ ಸಂಘವನ್ನು ತೀರ್ಥಹಳ್ಳಿಯಲ್ಲಿ ಸ್ಥಾಪಿಸಿದ್ದೇನೆ. ಇದು ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಮತ್ತು ಕರ್ನಾಟಕದಲ್ಲಿ ಎರಡನೇ ಕಾರ್ಮಿಕರ ಸಹಕಾರ ಸಂಘವಾಗಿದೆ ಎಂದು ಕಾರ್ಮಿಕರ ಹಿತ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಮಂಜುನಾಥ ಡಿ ಗೌಡ ಹೇಳಿದ್ದಾರೆ.
ತೀರ್ಥಹಳ್ಳಿ ಬಂಟರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊದಲನೇ ವರ್ಷದ ಕಾರ್ಮಿಕರ ಹಿತ ಸಹಕಾರ ಸಂಘದ ಮಹಾಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಕಾರ್ಮಿಕರಿಂದ ಕಾರ್ಮಿಕರಿಗೋಸ್ಕರ ಒಂದು ಸಹಕಾರ ಸಂಘ ಸ್ಥಾಪಿಸಬೇಕೆಂಬ ಮಹದಾಸೆಯೊಂದಿಗೆ ಮತ್ತು ಕಾರ್ಮಿಕರಿಗಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 2023 ರಲ್ಲಿ ಯೋಜನೆಯನ್ನು ರೂಪಿಸಿ ಸಹಕಾರ ಸಂಘವನ್ನು ತೆರೆಯಲು ಮುಂದಾಗಿದ್ದೇವೆ. ಮೊದಲಿಗೆ 19 ಜನ ಪ್ರವರ್ತಕರನ್ನು ಒಟ್ಟುಗೂಡಿಸಿ ಸಂಘವನ್ನು ಸ್ಥಾಪನೆ ಮಾಡಲು ಮೊದಲನೇ ಹೆಜ್ಜೆ ಇಟ್ಟಿದ್ದೆ.ಹಾಗು ನನ್ನ ಜೊತೆ 19 ಜನ ಪ್ರವರ್ತಕರು ಸಂಘ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಿದರು.ಆದ್ದರಿಂದ ಇಂದು ಸಹಕಾರ ಸಂಘ ಸ್ಥಾಪಿಸಲು ಸಾಧ್ಯವಾಯಿತು ಎಂದಿದ್ದಾರೆ.
ನಮ್ಮ ಸಂಘದ ಸದಸ್ಯತ್ವಕ್ಕಾಗಿ ಕಾರ್ಮಿಕರನ್ನು ಒಟ್ಟುಗೂಡಿಸಲು ನಿರಂತರ ಪ್ರಯತ್ನಪಟ್ಟು ತಾತ್ಸಾರಕ್ಕೊಳಗಾಗಿದ್ದರೂ ಹಿಂದೆ ಸರಿಯದೆ ಕಾರ್ಮಿಕರನ್ನು ಹುಡುಕಿ ಸಂಘದ ದ್ಯೇಯೋದ್ದೇಶಗಳನ್ನು ಹಾಗೂ ಸಂಘದಿಂದಾಗುವ ಪ್ರಯೋಜನಗಳನ್ನು ವಿವರಿಸಿ ಅನೇಕ ಸದಸ್ಯತ್ವಗಳನ್ನು ಮಾಡಿರುತ್ತೇವೆ. ನಮ್ಮ ಸಂಘದ ಸದಸ್ಯರಾದವರಿಗೆ ವಿಮಾ ಸೌಲಭ್ಯ ವನ್ನು ಸಹಕಾರ ಸಂಘ ಸ್ಥಾಪನೆಯಾಗುವ ಮೊದಲೇ ಕಾರ್ಮಿಕರಿಗೆ ನೀಡಿ ಅವರ ಕುಟುಂಬಗಳಿಗೆ ನೆರವಾಗಿದ್ದೇವೆ.ಇಂದು ನಮ್ಮ ಸಹಕಾರ ಸಂಘ ಸ್ಥಾಪನೆಯಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು , ವಸತಿ ಯೋಜನೆ ,ಪಿಂಚಣಿ ಯೋಜನೆ ,ವಿಮಾ ಯೋಜನೆ ,ಕಾರ್ಮಿಕರ ಮಕ್ಕಳಿಗೆ ಸಿಗುವ ವಿದ್ಯಾರ್ಥಿ ವೇತನ ಮುಂತಾದ ಕಾರ್ಮಿಕರಿಗೆ ಸಿಗುವ ಯೋಜನೆಗಳನ್ನು ಎಲ್ಲಾ ಕಾರ್ಮಿಕರಿಗೆ ಸಂಘದಿಂದ ತಲುಪುವಂತೆ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಸಂಘಕ್ಕೆ ಇನ್ನೂ ಹೆಚ್ಚಿನ ಸದಸ್ಯತ್ವ ಪಡೆಯುವ ಮೂಲಕ ಸಂಘವನ್ನು ಅತ್ಯುತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಸಹಕಾರ ಸಂಘದ ಪ್ರವರ್ತಕರು ,ಕಾರ್ಮಿಕರು ಪಾಲ್ಗೊಂಡಿದ್ದು, ರಮೇಶ್ ಸ್ವಾಗತಿಸಿ, ಭಾಸ್ಕರ್ ಆಚಾರ್ಯ ನಿರೂಪಿಸಿದರು , ಪ್ರಾರ್ಥನೆಯನ್ನು ಸಾವಿತ್ರಿ ಷಣ್ಮುಖ , ಪ್ರಸ್ತಾವಿಕ ನುಡಿಗಳನ್ನು ಜ್ಯೋತಿ ದಿಲೀಪ್ ಆಡಿದ್ದು, ರಾಜೀವನ್ ವಂದಿಸಿದ್ದರು.
