ತೀರ್ಥಹಳ್ಳಿಯಲ್ಲಿ ಯೋಗ ಪ್ರಶಿಕ್ಷಣ ಶಿಬಿರ!
– ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜನೆ
– ಆರೋಗ್ಯ, ಯೋಗ ಮಾಹಿತಿ: 3 ದಿನ ವಿಭಿನ್ನ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ದಿನಾಂಕ 26 ರಿಂದ 27ರವರೆಗೆ ವಿದ್ಯಾಧಿರಾಜ ಸಭಾ ಭವನದಲ್ಲಿ “ಯೋಗ ಪ್ರಶಿಕ್ಷಣ ಶಿಬಿರ” ಅತ್ಯಂತ ಯಶಸ್ವಿಯಾಗಿ ನಡೆಯಿತು.6 ಯೋಗ ಕೇಂದ್ರಗಳ 11 ಶಾಖೆಗಳಿಂದ ಸುಮಾರು 140 ಯೋಗಬಂಧುಗಳು ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದರು.
ದಿನಾಂಕ 26ರ ಬೆಳಿಗ್ಗೆ 6 ಘಂಟೆಗೆ ಆರಂಭವಾದ ಯೋಗಾಭ್ಯಾಸ ತರಗತಿಯ ಆರಂಭದಲ್ಲಿ ಇತ್ತೀಚೆಗೆ ಪೆಹೆಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಶಿಬಿರವನ್ನು ಆರಂಭಿಸಲಾಯಿತು.
ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಯೋಗ ಗುರುಗಳಾದ ಶ್ರೀ ರಾಘವೇಂದ್ರ ಶೆಣೈ ಯವರು ಆಗಮಿಸಿ ಶಿಬಿರಾರ್ಥಿಗಳಿಗೆ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಹಾಗೂ ಚಿಕಿತ್ಸಕ ಆಸನಗಳ ಅಭ್ಯಾಸದ ತರಗತಿಯನ್ನು ನಡೆಸಿಕೊಟ್ಟರು.
ಈ ಶಿಬಿರದಲ್ಲಿ ತೀರ್ಥಹಳ್ಳಿ ಮೂಲದವರಾದ ಉಡುಪಿಯ ಬಿಗ್ ಮೆಡಿಕಲ್ ಸೆಂಟರ್ ನ ಡಾ||ಶೃತಿ ಬಲ್ಲಾಳ್ ರವರು “ಮಧುಮೇಹ ನಿಯಂತ್ರಣದಲ್ಲಿ ಯೋಗ ಹಾಗೂ ಆಹಾರದ ಪಾತ್ರ” ವಿಷಯದ ಬಗ್ಗೆ ಹಾಗೂ ಡಾ||ವಿವೇಕ್ ಶೆಣೈ ಕುರುವಳ್ಳಿ ಯವರು “ಬೌದ್ಧಿಕ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ” ಎನ್ನುವ ವಿಷಯದ ಬಗ್ಗೆ ಬೌದ್ಧಿಕ್ ನಡೆಸಿಕೊಟ್ಟರು.
ಸಂಜೆ ಶಿಬಿರಾರ್ಥಿಗಳಿಂದ ಭಜನಾ ನೃತ್ಯ ,ಯೋಗ ನೃತ್ಯ ಮತ್ತು ಸಂಕೀರ್ತನ ಯೋಗ ಪ್ರದರ್ಶನ ನಡೆಯಿತು.
ಭಾನುವಾರ ಬೆಳಿಗ್ಗೆ ಯೋಗಾಭ್ಯಾಸದ ನಂತರ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಯೋಗ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಹೆಚ್. ಎಂ ಕೃಷ್ಣಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಗೌರವಾಧ್ಯಕ್ಷ ರಾದ ಡಾ.ಜೀವಂಧರ್ ಜೈನ್, ಶಿಬಿರದ ಯೋಗ ಗುರುಗಳಾದ ಶ್ರೀ ರಾಘವೇಂದ್ರ ಶೆಣೈ, ರಾಷ್ಟ್ರೀಯ ಸ್ವಯಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ದಿನೇಶ್ ಭಾರತೀಪುರ, ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸಂದೇಶ್ ಜವಳಿ ಮತ್ತು ಯೋಗ ಸಮಿತಿಯ ಸ್ಥಾಪಕ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿಯವರು ಭಾಗವಹಿಸಿದ್ದರು…
ಶ್ರೀಮತಿ ಅನುಸೂಯ ರಂಗನಾಥ್ ಪ್ರಾರ್ಥಿಸಿದರು ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಪ್ರಕಾಶ್ ಟಿ ವಿ ಸ್ವಾಗತಿಸಿದರು, ಕೋಶಾಧಿಕಾರಿ ಶ್ರೀ ನಾಗರಾಜ್ ಪೈ ಪ್ರಾಸ್ತಾವಿಕ ಭಾಷಣ ಮಾಡಿದರು, ಶಿಬಿರದಲ್ಲಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಪ್ರಶಿಕ್ಷಣ ಶಿಬಿರ ದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು..
ಕೊನೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯ ಐತಾಳ್ ಸರ್ವರಿಗೂ ವಂದಿಸಿದರು.ಹೇಮ್ ಪ್ರಕಾಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಭೋಜನ ದೊಂದಿಗೆ 3 ದಿನಗಳ ಯೋಗ ಪ್ರಶಿಕ್ಷಣ ಶಿಬಿರ ಸಂಪನ್ನಗೊಂಡಿತು.
